ಕಾಶ್ಮೀರ : ಕಾಶ್ಮೀರದ ಬಡಗಾಂವ್ ಜಿಲ್ಲೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಓರ್ವ ಉಗ್ರ ಹತನಾಗಿದ್ದಾನೆ. ಆದರೆ ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆಯನ್ನು ಪ್ರತಿಭಟಿಸಲು ಎನ್‌ಕೌಂಟರ್ ತಾಣದಲ್ಲಿ ಸೇರಿದ ಜನಸಮೂಹವನ್ನು ನಿಯಂತ್ರಿಸಲು ಸೇನೆ ನಡೆಸಿದ ಕಾರ್ಯಾಚರಣೆಗೆ ಮೂವರು ನಾಗರಿಕರು ಬಲಿಯಾದರು.
ಇದನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಎನ್‌ಕೌಂಟರ್ ತಾಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಾ ಭದ್ರತಾ ಪಡೆಗಳಿಗೆ ಗುಂಡು ಹಾರಿಸುವ ಅನಿವಾರ್ಯತೆಯನ್ನು ತಂದೊಡ್ಡುವ ಟ್ರೆಂಡ್ ಕಳೆದ ವರ್ಷದಿಂದ ಆರಂಭವಾಗಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಾಶ್ಮೀರಿ ಯುವಕರಿಗೆ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸಕೂಡದೆಂದು ಕಟ್ಟುನಿಟ್ಟಾಗಿ ಹೇಳಿದ ಹೊರತಾಗಿಯೂ ಈ ಟ್ರೆಂಡ್ ಇನ್ನೂ ನಿಂತಿಲ್ಲ.
ಎನ್‌ಕೌಂಟರ್ ನಡೆದ ತಾಣದಲ್ಲಿ ಹತನಾದ ಉಗ್ರನ ಬಳಿ ಇದ್ದ ಒಂದು ಬಂದೂಕನ್ನು ಯೋಧರು ವಶಪಡಿಸಿಕೊಂಡಿರುವುದಾಗಿ ಸೇನಾ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಎನ್‌ಕೌಂಟರ್ ಮುಗಿದಿದ್ದು ಈ ಕಾರ್ಯಾಚರಣೆಯಲ್ಲಿ ಒಬ್ಬ ಪ್ಯಾರಾ ಟ್ರೂಪರ್ ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ತಾಣಕ್ಕೆ ಸಮೀಪ ಪ್ರತಿಭಟನೆ ನಡೆಸುತ್ತಿದ್ದವರನ್ನು ಯೋಧರು ನಿಯಂತ್ರಿಸಲು ನಡೆಸಿದ ಗುಂಡಿನ ಹಾರಾಟದಲ್ಲಿ ಇಪ್ಪತ್ತರ ಹರೆಯದ ಮೂವರು ನಾಗರಿಕರು ಮೃತಪಟ್ಟು ಇತರ 18 ಮಂದಿ ಗಾಯಗೊಂಡರೆಂದು ಅಧಿಕಾರಿ ತಿಳಿಸಿದ್ದಾರೆ. ಮೃತ ನಾಗರಿಕರನ್ನು ಝಹೀದ್ ದರ್, ಸಾಕಿಬ್ ಅಹ್ಮದ್ ಮತ್ತು ಇಶಾಕ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ.
ಪ್ರತಿಭಟನಕಾರರು ನಡೆಸಿದ್ದ ಕಲ್ಲು ತೂರಾಟದಲ್ಲಿ 43 ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸ್ ದಳದ 20 ಮಂದಿ ಸೇರಿದಂತೆ ಒಟ್ಟು 63 ಮಂದಿ ಭದ್ರತಾ ಸಿಬಂದಿಗಳು ಗಾಯಗೊಂಡರು. 11 ತಾಸುಗಳ ಕಾಲ ನಡೆದ ಸುದೀರ್ಘ ಎನ್‌ಕೌಂಟರ್‌ನಲ್ಲಿ ಒಬ್ಬ ಪ್ಯಾರಾ ಟ್ರೂಪರ್ ಗಾಯಗೊಂಡ ಎಂದು ಭದ್ರತಾ ಅಧಿಕಾರಿ ಹೇಳಿದರು. ಪ್ರತಿಭಟನಕಾರರು ಆಜಾದಿ ಘೋಷಣೆಗಳನ್ನು ಹಾಗೂ ಉಗ್ರರ ಪರ ಘೋಷಣೆಯನ್ನು ಕೂಗುತ್ತಿದ್ದರು.