ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಥರದ ಏಳು-ಬೀಳುಗಳು , ಸೋಲು-ಸವಾಲುಗಳು ಇದ್ದೇ ಇರುತ್ತವೆ. ಕೆಲವೊಂದಕ್ಕೆ ನಮ್ಮಲ್ಲೆ ಉತ್ತರವಿದ್ದರೆ, ಇನ್ನು ಕೆಲವು ನಮ್ಮ ಕೈ ಮೀರಿದಂತಾಗಿರುತ್ತವೆ. ಜೀವನದಲ್ಲಿ ಕೈ ಮೀರಿದ ಎಷ್ಟೋ ವಿಷಯಗಳಿಗೆ “ಬಡ್ಡಿ ಮಗನ್ ಲೈಫು’ ಅಂಥ ಜೀವನಕ್ಕೆ ಬೈಯುತ್ತ ಕೈ ಕೈ ಹಿಸುಕಿಕೊಳ್ಳುವುದು ಬಿಟ್ಟು, ಅನೇಕರಿಗೆ ಬೇರೆ ಮಾರ್ಗ ಗೊತ್ತಿರುವುದಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ “ಬಡ್ಡಿ ಮಗನ್ ಲೈಫು’ ಅನ್ನೋ ಹೆಸರಿನಲ್ಲೆ ಹೊಸಬರ ಚಿತ್ರವೊಂದು ತೆರೆಗೆ ಬಂದಿದೆ.
ಶ್ರೀಮಂತರ ಮನೆಯ ಹುಡುಗಿ, ಅದೇ ಮನೆಯ ಎದುರು ಮನೆಯ ಮಧ್ಯಮ ಕುಟುಂಬದ ಹುಡುಗ ಇಬ್ಬರೂ ಪ್ರೀತಿಸುತ್ತಾರೆ. ಈ ವಿಷಯ ಗೊತ್ತಾದ ಹುಡುಗಿಯ ಮನೆಯವರು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಬೇರೆ ವರನ ಜೊತೆ ಮದುವೆ ನಿಶ್ಚಯಿಸುತ್ತಾರೆ. ಇದೇ ವೇಳೆ ಹೇಗೋ ಎರಡೂ ಮನೆಯವರ ಕಣ್ತಪ್ಪಿಸಿ ಹುಡುಗ-ಹುಡುಗಿ ಇಬ್ಬರೂ ಓಡಿ ಹೋಗುತ್ತಾರೆ. ಹೀಗೆ ಓಡಿ ಹೋಗುವ ಪ್ರೇಮಿಗಳು ಅಂತಿಮವಾಗಿ ಮದುವೆಯಾಗುತ್ತಾರಾ?
ಅಥವಾ ಬೇರೆ ಬೇರೆಯಾಗುತ್ತಾರಾ? ಹೆತ್ತವರ ಮುಂದೆ ತಿರುಗಿ ನಿಲ್ಲುತ್ತಾರಾ? ಅಥವಾ ಎಲ್ಲರ ಮನ ಒಲಿಸುತ್ತಾರಾ? ಅನ್ನೋದೆ ಚಿತ್ರದ ಕಥೆ. ಅದನ್ನ ನೋಡಬೇಕು ಅಂದ್ರೆ ಕ್ಲೈಮ್ಯಾಕ್ಸ್‌ವರೆಗೆ ಕಾಯಬೇಕು. ಇಷ್ಟು ಹೇಳಿದ ಮೇಲೂ ಚಿತ್ರದ ಬಗ್ಗೆ ಕುತೂಹಲವಿದ್ದರೆ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಅಡ್ಡಿಯಿಲ್ಲ. ಚಿತ್ರದ ಟೈಟಲ್ ಕೇಳ್ಳೋದಕ್ಕೆ ಸ್ವಲ್ಪ ವಿ”ಚಿತ್ರ’-ವಿಭಿನ್ನ ಎನಿಸಿದರೂ, ಚಿತ್ರದ ಕಥೆಯಲ್ಲಿ, ನಿರೂಪಣೆಯಲ್ಲಿ ಅಂಥ ವಿಚಿತ್ರ-ವಿಭಿನ್ನತೆಯನ್ನೇನೂ ಹುಡುಕುವಂತಿಲ್ಲ.
ಕನ್ನಡದಲ್ಲಿ ಈಗಾಗಲೆ ಬಂದು ಹೋದ ಲೆಕ್ಕವಿಲ್ಲದಷ್ಟು ಚಿತ್ರಗಳ ಕಥೆ ಇಲ್ಲೂ ಹೊಸ ಹೊಸ ಕಲಾವಿದರ ಮೂಲಕ ಮತ್ತೆ ತೆರೆಮೇಲೆ ಬಂದಿದೆ. ಚಿತ್ರದ ಟೈಟಲ್ ಮತ್ತು ಕಥೆಯಲ್ಲಿ ಬರುವ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರು ಹೊಸಬರು ಅನ್ನೋದನ್ನ ಬಿಟ್ಟರೆ ಚಿತ್ರದ ಕಥೆ, ಚಿತ್ರಕಥೆ, ನಿರೂಪಣೆ, ದೃಶ್ಯಗಳು ಎಲ್ಲೂ ಹೊಸತನ ಹುಡುಕುವಂತಿಲ್ಲ. ನಿರ್ದೇಶಕರು ಎಲ್ಲೂ ರಿಸ್ಕ್ ತೆಗೆದುಕೊಳ್ಳದೆ ಅದೇ ಕಥೆಗೆ ಹೊಸ ಹೊಸ ಹೆಸರಿಡುವುದಕ್ಕಾಗಿಯೇ ಚಿತ್ರ ಮಾಡಿದಂತಿದೆ!
ಇನ್ನು ಚಿತ್ರದ ನಾಯಕಿ ಐಶ್ವರ್ಯಾ ರಾವ್, ಖಳನಾಯಕನ ಪಾತ್ರದಲ್ಲಿ ಬಲ ರಾಜವಾಡಿ ಅಭಿನಯ ಗಮನ ಸೆಳೆಯುತ್ತದೆ. ಇಬ್ಬರೂ ಕೂಡ ತಮ್ಮ ಪಾತ್ರದ ಮೂಲಕ ಇಡೀ ಚಿತ್ರವನ್ನು ನೋಡುವಂತೆ ಮಾಡುತ್ತಾರೆ. ಉಳಿದಂತೆ ಪೂರ್ಣಚಂದ್ರ ತೇಜಸ್ವಿ, ಕಲ್ಪನಾ, ರಜನಿಕಾಂತ್ ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ನಿರ್ದೇಶಕರ ಅಣತಿಯಂತೆ ಮಾಡಿ ಒಪ್ಪಿಸಿರುವಂತಿದೆ. ತಾಂತ್ರಿಕವಾಗಿ ಲವಿತ್ ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಸಂಕಲನ ಕಾರ್ಯ ಇನ್ನಷ್ಟು ಮೊನಚಾಗಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಒಂದೆರಡು ಹಾಡುಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಕಿವಿಯಲ್ಲಿ ಉಳಿಯುವುದಿಲ್ಲ. ಒಟ್ಟಾರೆ ಚಿತ್ರದ ಟೈಟಲ್ ನೋಡಿಕೊಂಡು, ಹೊಸಕಥೆ ಏನಾದ್ರೂ ಇರಬಹುದು ಎಂದುಕೊಂಡು ಥಿಯೇಟರ್‌ಗೆ ಹೋಗುವುದಕ್ಕಿಂತ ಹೊಸಬರ ಪ್ರಯತ್ನದ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.
ಚಿತ್ರ: ಬಡ್ಡಿ ಮಗನ್ ಲೈಫ್
ನಿರ್ಮಾಣ: ಗ್ರೀನ್ ಚಿಲ್ಲಿ ಎಂಟರ್‌ಟೈನ್ಮೆಂಟ್
ನಿರ್ದೇಶನ: ಪವನ್ – ಪ್ರಸಾದ್
ತಾರಾಗಣ: ಸಚಿನ್, ಐಶ್ವರ್ಯಾ ರಾವ್, ಬಲ ರಾಜವಾಡಿ, ರಜನಿಕಾಂತ್, ವನಿತಾ, ಪದ್ಮನಾಭ, ಪೂರ್ಣಚಂದ್ರ ತೇಜಸ್ವಿ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್