ಗಜೇಂದ್ರಗಡ: ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವೀಯತೆಯ ನೆಲೆಗಟ್ಟಿನ ಚಿಂತನೆಯೊಂದಿಗೆ ಬೆಳೆದದ್ದು ಬೌದ್ಧ ಧರ್ಮ ಮಾತ್ರ. ಈ ನಿಟ್ಟಿನಲ್ಲಿ ಧರ್ಮ ರಹಿತ ಸಮಾಜವಿಲ್ಲ, ಸಮಾಜ ರಹಿತ ಸಾಹಿತ್ಯವಿಲ್ಲ ಎಂದು ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಹೇಳಿದರು. ಪಟ್ಟಣದ ಮೈಸೂರು ಮಠದಲ್ಲಿ ಕಸಾಪ ತಾಲೂಕು ಹಾಗೂ ನಗರ ಘಟಕ ವತಿಯಿಂದ ನಡೆದ 92ನೇ ವಾರದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರನ್ನೂ ಸರಿ ಸಮನಾಗಿ ಕಂಡು, ಸಮಾನತೆಯ ಮಂತ್ರವನ್ನು ಬೋಧಿಸಿದ ಬುದ್ಧನು ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವ ಬೌದ್ಧ ಧರ್ಮವು ವಿಶ್ವಮಾನ್ಯವಾಗಿದೆ. ಮನುಷ್ಯನ ಉನ್ನತಿಗೆ ಬೇಕಾದ ಸರಳ ಹಾಗೂ ನಿಸರ್ಗ ತರ್ಕವನ್ನು ಅನ್ವೇಷಿಸಿದ ಮೊದಲ ವ್ಯಕ್ತಿ ಭಗವಾನ್ ಬುದ್ಧ. ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರೊಬ್ಬರ ಸಹಾಯವೂ ಬೇಕಿಲ್ಲ. ಸಾಮಾನ್ಯ ಬದುಕಿನ ಪ್ರಶ್ನೆಯೇ ಬೌದ್ಧ ತಾತ್ವಿಕತೆಯ ಹುಟ್ಟಿಗೆ ಕಾರಣ ಎಂದರು.
ನಿವೃತ್ತ ಉಪನ್ಯಾಸಕ ಕೆ.ಎಸ್. ಗಾರವಾಡ ಹಿರೇಮಠ ಮಾತನಾಡಿ, ಬೌದ್ಧ ಬಿಕ್ಕುಗಳು ಎಂದರೆ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಒಂದು ಭಾಗವಾಗಿದ್ದರು. ಇವರು ಭಿಕ್ಷೆಯಿಂದಲೇ ಜೀವನ ಸಾಗಿಸುತ್ತದ್ದರು. ಪ್ರಾಚೀನ ಮಗಧ ದೇಶದಲ್ಲಿ ಬೌದ್ಧ ವಿಹಾರಗಳು ಹೆಚ್ಚಾಗಿದ್ದವು. ಬೌದ್ಧ ಭಿಕ್ಷುಗಳು ಬದುಕಿನ ಆಸೆ, ಆಕಾಂಕ್ಷೆಗಳನ್ನೆಲ್ಲ ತೊರೆದು, ಗುಹಾಂತರದಲ್ಲಿ ಧ್ಯಾನ, ಜಪ, ತಪಗಳನ್ನು ಮಾಡಿ ಬೌದ್ಧ ಧರ್ಮದ ತತ್ವ ಮಾರ್ಗಗಳ ಪಾಲನೆಯಲ್ಲಿ ನಿರತರಾಗಿದ್ದರು ಎಂದರು.
ಎಸ್.ಕೆ. ಕಟ್ಟಿಮನಿ, ಸಿದ್ರಾಮಯ್ಯ ಹಿರೇಮಠ, ಶರಣಮ್ಮ ಅಂಗಡಿ, ಎಸ್. ಎಸ್. ನರೇಗಲ್ಲ, ಎಂ.ಎಸ್. ಮಕಾನದಾರ,
ಎಸ್.ಎ. ಜಿಗಳೂರ, ಎಸ್.ಬಿ. ಚಳಗೇರಿ, ಪಿ.ಕೆ. ಹಿರೇಮಠ, ಎಚ್.ಎ. ಚಿಂತಗುಂಟಿ, ಡಿ.ಆರ್. ಮ್ಯಾಗೇರಿ, ಪಿ.ಐ. ಜೂಚನಿ, ಬಿ.ವಿ. ಮುನವಳ್ಳಿ, ಹುಚ್ಚಪ್ಪ ಹಾವೇರಿ ಸೇರಿದಂತೆ ಇತರರು ಇದ್ದರು.