ಕಲಬುರಗಿ: ಅಂಬೇಡ್ಕರ್ ಅವರು ಒಪ್ಪಿಕೊಂಡಿದ್ದ ಬೌದ್ಧ ಧರ್ಮ ಜಗತ್ತಿನಲ್ಲಿ ಏಕೈಕ ವೈಜ್ಞಾನಿಕವಾದ ಧರ್ಮವಾಗಿದೆ. ಈ ಧರ್ಮ ದೇವರ ಬದಲು ಮನುಷ್ಯ ಪ್ರೀತಿಯಲ್ಲಿ ನಂಬಿಕೆ ಉಳ್ಳದ್ದಾಗಿದೆ. ಆದ್ದರಿಂದ ಜಗತ್ತಿನಾದ್ಯಂತ ಹರಡಿಕೊಂಡಿದೆ ಎಂದು ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ| ಎಚ್.ಟಿ.ಪೋತೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಎಸ್.ಎಸ್. ಪ್ರಕಾಶನ, ಸಹನಾ ಪ್ರಕಾಶನ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೌದ್ಧ ಧಮ್ಮ ಮತ್ತು ಬಾಬಾಸಾಹೇಬ ಡಾ| ಬಿ.ಆರ್. ಅಂಬೇಡ್ಕರ್ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ವೈಜ್ಞಾನಿಕತೆ ಧರ್ಮ ಅಪ್ಪಿಕೊಂಡಿದ್ದ ಬಾಬಸಾಹೇಬರು, 1935ರಲ್ಲಿ ಯೋವಾ ಸಮ್ಮೇಳನದಲ್ಲಿ ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ ಎಂದು ಹೇಳಿ 21 ವರ್ಷಗಳ ನಂತರ ಧರ್ಮಾಂತರವಾಗಿ, ದೇಶಕ್ಕೆ ಬೌದ್ಧ ಧಮ್ಮ ಮರಳಿ ಪರಿಚಯಿಸಿದ್ದಾರೆ. ಡಾ| ಅಂಬೇಡ್ಕರ ಅವರ ಚರಿತ್ರೆ ಸಂಪೂರ್ಣವಾಗಿ ಓದುವುದಿಲ್ಲವೋ ಅಲ್ಲಿವರೆಗೆ ಅಂಬೇಡ್ಕರ ಅವರನ್ನು ಅರಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ| ಮಾರುತಿರಾವ ಡಿ. ಮಾಲೆ ಮಾತನಾಡಿ, ಭಾರತ ದೇಶದ ನಿಜವಾದ ಚರಿತ್ರೆ ಬೌದ್ಧ ಧರ್ಮದಲ್ಲಿ ಅಡಗಿದೆ. ಹಲವಾರು ಹೋರಾಟಗಳು ನಡೆದರೂ ಇನ್ನೂ ನಮ್ಮಲ್ಲಿ ಅಸ್ಪೃಶ್ಯತೆ ಹೋಗಿಲ್ಲ. ಅದನ್ನು ಹೋಗಿಸಲು ಬೌದ್ಧ ಧಮ್ಮದ ಪ್ರಚಾರ ಅವಶ್ಯಕ. ಪಂಚಶೀಲ ತತ್ವ ಮತ್ತು ಅಷ್ಟಾಂಗ
ಮಾರ್ಗಗಳು ಮನುಷ್ಯನಿಗೆ ಮನುಷ್ಯನನ್ನಾಗಿ ಮಾಡುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಬುದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ| ಗಾಂಧೀಜಿ ಮೇಳಕೇರೆ ಮಾತನಾಡಿದರು.
ವೇದಿಕೆ ಕಾರ್ಯದರ್ಶಿ ಎಚ್.ಎಸ್. ಬೇನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶಿನಾಥ ಮುಖರ್ಜಿ ಕಾರ್ಯಕ್ರಮ ನಿರೂಪಿಸಿದರು. ಅನಿಲ ಟೆಂಗಳಿ ವಂದಿಸಿದರು.