Advertisement
ನಾವು ಗೆಳೆಯರೆಲ್ಲ ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿರುವ “ಸಂದಾಕ್ಫು’ ಬೆಟ್ಟ ಏರಲು ಹೋಗಿದ್ದೆವು. ಸಮುದ್ರ ಮಟ್ಟದಿಂದ 11930 ಅಡಿ ಎತ್ತರದಲ್ಲಿರುವ ಪುಟ್ಟ ಗ್ರಾಮ. “ಸಂದಾಕ್ಫು’ ಎಂದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ “ವಿಷಕಾರಿ ಸಸ್ಯಗಳ ನಾಡು’ ಎಂದರ್ಥ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುವ “ಅಕೊನಿಟಂ’ (Aconitum) ಎಂಬ ಸಸ್ಯ ಅತ್ಯಂತ ವಿಷಕಾರಿ. ಅದರಿಂದಲೇ ಊರಿಗೆ ಹೆಸರು ಬಂತು. ಇಲ್ಲಿ ಪ್ರತಿ ಹೆಜ್ಜೆ ಇಡುವಾಗಲೂ, ಇದೇ ಕೊನೆಯ ಹೆಜ್ಜೆಯೇನೋ ಎನ್ನುವ ಆತಂಕ ಆಗಾಗ್ಗೆ ಕಂಪಿಸುವಂತೆ ಮಾಡುತ್ತದೆ.
Related Articles
Advertisement
ಆ ತುದಿಯಿಂದ, ಅರುಣೋದಯವನ್ನು ನೋಡಲು, ಇಡೀ ರಾತ್ರಿ ಅಲ್ಲಿಯೇ ಕಳೆದೆವು. ಬೆಳಗ್ಗೆ 4.30ಕ್ಕೇ ಸೂರ್ಯ, ಹೊಂಬಣ್ಣದ ಆಗಸದ ಬಟ್ಟಲನ್ನು ಹೊತ್ತುಕೊಂಡು ಬಂದ. ಮಂಜಿನ ಮಹಾಸಾಗರದಿಂದ, ಸೂರ್ಯ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೊದ ಮೊದಲು ತೋರಿದ್ದ. ಅದನ್ನು ನೋಡಿದ್ದೇ, ನಾಲ್ಕು ದಿನಗಳ ನಮ್ಮ ಚಾರಣದ ನೋವೆಲ್ಲ ಕರಗಿತು. ಅಪರೂಪದ ಅರುಣೋದಯದ ಜತೆಜತೆಗೇ ಆ ಬೆಳಕು, ಬುದ್ಧನನ್ನೂ ಎದುರು ತೋರಿಸಿತ್ತು. “ಸಂದಾಕ್ಫು’ವಿನ ತುದಿಯಲ್ಲಿ ನಿಂತಾಗ, ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ 5 ಅತಿ ಎತ್ತರದ ಪರ್ವತಶ್ರೇಣಿಗಳಲ್ಲಿ ನಾಲ್ಕು ಪರ್ವತಗಳು ಒಟ್ಟಿಗೆ ಕಾಣಿಸುತ್ತವೆ.
ಮೌಂಟ್ ಎವರೆಸ್ಟ್, ಕಾಂಚನಜುಂಗಾ, ಲ್ಹೋತ್ಸೆ ಮತ್ತು ಮಕಾಲು ಪರ್ವತಶ್ರೇಣಿಗಳು ಮಲಗಿದ ಬುದ್ಧನಂತೆ ಗೋಚರವಾಗುತ್ತವೆ. ಸ್ಥಳೀಯರು ಈ ದೃಶ್ಯಕ್ಕೆ “ಸ್ಲಿಪಿಂಗ್ ಬುದ್ಧ’ ಎಂದೇ ಕರೆಯುತ್ತಾರೆ. ನೀವು ಚಿತ್ರವನ್ನು ಗಮನಿಸಿದರೆ, ಎಡತುದಿಗೆ ತಲೆ, ಮಧ್ಯದಲ್ಲಿ ಹೊಟ್ಟೆ ಮತ್ತು ಬಲತುದಿಯಲ್ಲಿ ಕಾಲಿನ ಆಕಾರ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬುದ್ಧನ ನಿದಿರೆಯ ಸೊಬಗನ್ನು ತೃಪ್ತಿಯಾಗುವಷ್ಟು ನೋಡಿ, ಅಲ್ಲಿಂದ ಹೊರಟೆವು.
* ಸುಚಿತ್ ರಾಜು, ದಾವಣಗೆರೆ