ದಾವಣಗೆರೆ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ನೀಡಿರುವ ಮಹಾನ್ ಮಾನವತಾವಾದಿ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ಆಧುನಿಕ ಭಾರತದ ಬುದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಬಣ್ಣಿಸಿದ್ದಾರೆ. ಶುಕ್ರವಾರ ಮಹಾನಗರಪಾಲಿಕೆ ಆವರಣದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ರವರ 126ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಸಮಾನತೆಯ ಮಂತ್ರ ಬಿತ್ತಿದ ಆಧುನಿಕ ಭಾರತದ ಮಹಾನ್ ಮಾನವತಾವಾದಿ ಎಂದರು.
ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ಬಡ ಕುಟುಂಬದಲ್ಲಿ 1891 ಏ. 14 ರಂದು ಜನಿಸಿದ ಅಂಬೇಡ್ಕರ್ ಬಾಲ್ಯದಲ್ಲೇ ಅಸ್ಪೃಶ್ಯತೆ ಎಂಬ ಬೆಂಕಿಯಲ್ಲಿ ಬೆಂದರೂ ದೃತಿಗೆಡದೆ ಸಾಮಾಜಿಕ ಕ್ರೌರ್ಯಕ್ಕೆ ಪ್ರತಿಯಾಗಿ ತಮ್ಮ ಎದೆಯೊಳಗೆ ಅಕ್ಷರಗಳನ್ನು ಬಿತ್ತಿಕೊಂಡು, ಅಪಮಾನದ ಮುಳ್ಳಿನ ಹಾದಿಯಲ್ಲಿ ನಡೆಯುತ್ತಲೇ ಉನ್ನತ ಪದವಿ ಪಡೆಯುತ್ತಾರೆ. ನಿರಂತರ ಪರಿಶ್ರಮ ಮತ್ತು ಅಧ್ಯಯನ ಶೀಲತೆಯಿಂದ ಬಹುದೊಡ್ಡ ವಿದ್ವಾಂಸರಾಗಿ ಹೊರ ಹೊಮ್ಮಿದವರು ಎಂದು ತಿಳಿಸಿದರು.
ಅಂಬೇಡ್ಕರ್ ಉದಾತ್ತ ಚಿಂತನೆಗಳ ಮೂಲಕ ಸಾವಿರಾರು ವರ್ಷಗಳಿಂದ ಶೋಷಣೆ, ತುಳಿತಕ್ಕೆ ಒಳಗಾಗಿದ್ದ ತಳ ಸಮುದಾಯಗಳನ್ನು ಒಗ್ಗೂಡಿಸಿ ಕುಡಿವ ನೀರಿನ ಕೆರೆ, ದೇಗುಲ ಪ್ರವೇಶ, ಮನು ಸ್ಮೃತಿ ಭಸ್ಮ ಮುಂತಾದ ಹೋರಾಟಗಳ ಮೂಲಕ ಜಾತಿ ವಿನಾಶಕ್ಕೆ ಶ್ರವಿಸಿದವರು. 20ಕ್ಕೂ ಹೆಚ್ಚು ವಿಭಾಗದಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದ ಅವರು ಪ್ರಖರ ಪ್ರಜಾತಂತ್ರಧಿವಾದಿ ಎನ್ನುವುದಕ್ಕೆ ಅವರು ನೀಡಿರುವ ಸಂವಿಧಾನವೇ ಸಾಕ್ಷಿ ಎಂದು ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿಯವರು ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಭಾರತಕ್ಕೆ ರಾಜಕೀಯ ಸ್ವಾತಂತ್ರ ತಂದು ಕೊಡಲು ಪ್ರಯತ್ನಿಸಿದರೆ ಅಂಬೇಡ್ಕರ್ ಭಾರತಕ್ಕೆ ರಾಜಕೀಯ ಸ್ವಾತಂತ್ರಕ್ಕಿಂತಲೂ ಮೊದಲು ಸಾಮಾಜಿಕ ಸ್ವಾತಂತ್ರ ದೊರೆಯಬೇಕು ಎಂದು ಪ್ರತಿಪಾದಿಸುತ್ತಿದ್ದರು.
ಸಾಮಾಜಿಕ ಕ್ರಾಂತಿಯ ಹೊರತಾಗಿ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದ ಅವರು ಸಂವಿಧಾನದಲ್ಲಿ ಸಮಾನತೆಗೆ ಅತಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ತಿಳಿಸಿದರು. ಅಂಬೇಡ್ಕರ ಅಧ್ಯಕ್ಷತೆಯಲ್ಲಿ ರೂಪಿತವಾದ ಭಾರತ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವೆಂದು ಪರಿಗಣಿಸಲ್ಪಟ್ಟಿದೆ.
ಅದಕ್ಕೆ ಕಾರಣ ಅಂಬೇಡ್ಕರ್ ಅವರಲ್ಲಿದ್ದ ಬಹುತ್ವ ಭಾರತದ ಸಾಂಸ್ಕೃತಿಕ ರಾಜಕೀಯ ನೆಲೆಗಳ ಜಾಗತಿಕ ತಿಳುವಳಿಕೆ, ಸರ್ವಧರ್ಮ ಸಮನ್ವಯ ಮನೋಭಾವ ಹಾಗೂ ಬಹು ಸಂಸ್ಕೃತಿಗಳ ಮಾನ್ಯತೆ ಎಂದು ತಿಳಿಸಿದರು.
ಅಂಬೇಡ್ಕರ್ ಕಾನೂನು ಸಚಿವರಾಗಿ ಹಿಂದೂ ಕೋಡ್ ಬಿಲ್ ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು, ವಿವಾಹ ವಿಚ್ಛೇದನ ಪಡೆಯುವ ಹಕ್ಕು, ಬಹು ಪತ್ನಿತ್ವ ನಿರಾಕರಣೆ, ವರದಕ್ಷಿಣೆ ನಿಷೇಧ, ಅಂತರ್ಜಾತಿ ವಿವಾಹಕ್ಕೆ ಅವಕಾಶ, ತಾಯ್ತನದ ಹೆರಿಗೆ ರಜೆ ಸೌಲಭ್ಯ ಮುಂತಾದ ಸೌಲಭ್ಯ ಒದಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಕಿದ್ದಾರೆ ಎಂದು ತಿಳಿಸಿದರು.