Advertisement

ಬುದ್ಧನನ್ನೂ “ಮೇಡ್‌ ಇನ್‌ ಚೀನ’ಮಾಡಹೊರಟ ಚೀನ: ಸಂತೋಷ್‌ ಜೀ

08:15 AM Dec 12, 2017 | Team Udayavani |

ಕೋಟ: ಚೀನ ತನ್ನ ಉತ್ಪನ್ನಗಳ ಮೂಲಕ ಪ್ರಪಂಚವನ್ನು ಆವರಿಸುತ್ತಿದೆ. ಇದರ ಮುಂದುವರಿಕೆಯಾಗಿ ಬುದ್ಧ ಚೀನದಲ್ಲಿ ಜನಿಸಿದವನು, ಬೌದ್ಧ ಧರ್ಮದ ಉಗಮ ಚೀನದಲ್ಲಿ, ಬುದ್ಧಗಯಾ ಚೀನದಲ್ಲಿದೆ ಎಂದು ಸುಳ್ಳುವಾದ ಹೂಡುವ ಮೂಲಕ ಬುದ್ಧನನ್ನೂ “ಮೇಡ್‌ ಇನ್‌ ಚೀನ’ ಮಾಡ ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಜೀ ಹೇಳಿದರು. ಅವರು ಕೋಟ ಕಾರಂತ ಕಲಾಭವನದಲ್ಲಿ ಭಗತ್‌ ಸಿಂಗ್‌ ಯುವ ವೇದಿಕೆ ಕೋಟ ಆಶ್ರಯದಲ್ಲಿ ಸೋಮವಾರ ನಡೆದ “ಚೀನ ವಸ್ತುವಿನ ಬಳಕೆ ದೇಶದ ಆರ್ಥಿಕತೆಗೆ ಸಾವಿನ ಕುಣಿಕೆ’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.

Advertisement

ಮನೆಯೊಳಗೆ ಹಾವಿದ್ದರೆ ನಿದ್ದೆ ಕಷ್ಟ !
ಭಾರತ ಸದಾ ತನಗೆ ಪಾಕ್‌ ಸವಾಲು ಎಂದು ಪರಿಗಣಿಸುತ್ತದೆ. ಆದರೆ ನಮಗೆ ನಿಜವಾದ ಎದುರಾಳಿ ಚೀನ. ಏಕೆಂದರೆ ಆ ದೇಶವು ಆಕ್ರಮಣಕಾರಿ ನೀತಿ ಹೊಂದಿದೆ ಮತ್ತು ಭಾರತಕ್ಕಿಂತ ಶಕ್ತಿಶಾಲಿಯಾಗಿದೆ. ಸೊಳ್ಳೆ ಮನೆಯೊಳಗಿದ್ದರೆ ಹೆಚ್ಚು ಆತಂಕವಿಲ್ಲದೆ ನಿದ್ದೆ
ಮಾಡಬಹುದು. ಆದರೆ ಅಪಾಯಕಾರಿ ಹಾವು ಮನೆಯೊಳಗಿದ್ದರೆ ನೆಮ್ಮದಿಯಿಂದ ನಿದ್ರಿಸುವುದು ಅಸಾಧ್ಯ. ಚೀನ ಹಾವಿನಂತೆ ಅಪಾಯಕಾರಿ ರಾಷ್ಟ್ರ ಎಂದು ಅವರು ಹೇಳಿದರು.

ಶೇ. 47ರಷ್ಟು ಕಾಶ್ಮೀರ ಭಾರತದ ಜತೆಗಿಲ್ಲ
ಭಾರತದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರಗಳ ತಪ್ಪು ನೀತಿಯಿಂದ ಈಗಾಗಲೇ ಶೇ. 47ರಷ್ಟು ಕಾಶ್ಮೀರದ ಭಾಗವನ್ನು ಚೀನ ಮತ್ತು ಪಾಕ್‌ ಕಬಳಿಸಿವೆ. ನಾವು ಇನ್ನೂ ಎಚ್ಚರವಾಗದಿದ್ದರೆ ಕಾಶ್ಮೀರದ ಇನ್ನಷ್ಟು ಭೂ ಭಾಗಗಳು ನಮ್ಮಿಂದ ದೂರವಾಗಲಿವೆ ಎಂದವರು ಆತಂಕ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಒಮ್ಮೆಯೂ ಭಾರತವನ್ನು ವಿರೋಧಿಸದ ದೇಶ ಟಿಬೆಟ್‌. ಅಲ್ಲಿನ ಧರ್ಮಗುರುವಿಗೆ ಭಾರತದಲ್ಲಿ ಆಶ್ರಯಕೊಟ್ಟದ್ದು ನಮ್ಮ ಮಾನವೀಯತೆಯ ಪ್ರತೀಕ. ಟಿಬೆಟ್‌ನಿಂದ ವಲಸೆ ಬಂದು, 39 ಶಿಬಿರಗಳಲ್ಲಿ ವಾಸಿಸುತ್ತಿರುವ 80,000 ಮಂದಿ ಇಂದಿಗೂ ಯಾವುದೇ ತಕರಾರು ಇಲ್ಲದೆ ಇದ್ದಾರೆ. ನಮ್ಮ ಸೇನೆಯಲ್ಲಿ ಸೇವೆಯಲ್ಲಿರುವ ಭಾರತೀಯೇತರರು ಎಂದರೆ ಟಿಬೆಟ್‌ನ ಗೂರ್ಖಾ ಜನಾಂಗದವರು ಮಾತ್ರ. ಹೀಗಾಗಿ ನಮಗೆ ಟಿಬೆಟ್‌ ಅತ್ಯಂತ ನಂಬಿಕಸ್ಥ ರಾಷ್ಟ್ರ ಎಂದರು.

ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ್‌ ಸಿ. ಕುಂದರ್‌ ಉದ್ಘಾಟಿಸಿದರು. ಭಗತ್‌ ಸಿಂಗ್‌ ಯುವ ವೇದಿಕೆ ಅಧ್ಯಕ್ಷ ಪ್ರಸಾದ್‌ ಮಣೂರು ಅಧ್ಯಕ್ಷತೆ ವಹಿಸಿದ್ದರು. ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್‌ ಹಂದೆ, ರಾಘವೇಂದ್ರ ಕಾಂಚನ್‌, ಸುಬ್ರಾಯ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಶಮಂತ್‌ ಕೆ. ಎಸ್‌. ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.