ಬಾಗಲಕೋಟೆ: ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹೊಂದಾಣಿಕೆ ಗುತ್ತಿಗೆ ಪದ್ಧತಿಯಿಂದ ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಾರ್ಷಿಕ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ಚಾಣಾಕ್ಷತನ ಹಾಗೂ ಕೆಲವು ಗುತ್ತಿಗೆದಾರರ ಸಂಘಟಿತ ಪ್ರಯತ್ನದಿಂದ ನಾಚೂಕಿನ ಪ್ರಯತ್ನಗಳು ಬಿಟಿಡಿಎನಲ್ಲಿ ನಡೆಯುತ್ತಿವೆ. ಇದರಿಂದ ಸಂತ್ರಸ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಹೊಣೆಹೊತ್ತ ಬಿಟಿಡಿಎ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಶಾಮೀಲಾಗಿ, ಕೋಟ್ಯಂತರ ನಷ್ಟಕ್ಕೆ ಕಾರಣರಾಗುತ್ತಿದ್ದಾರೆ ಎನ್ನಲಾಗಿದೆ.
ಏನಿದು ಹೊಂದಾಣಿಕೆ?: ಸರ್ಕಾರದ ನಿಯಮಾವಳಿ ಹಾಗೂ ಈ ವರೆಗೆ ಬಿಟಿಡಿಎನಲ್ಲಿ ನಡೆಯುತ್ತಿದ್ದ ನಿಯಮಗಳು ಸದ್ಯಕ್ಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. 1 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆದರೆ, ಗುತ್ತಿಗೆದಾರರು ಅದಕ್ಕಿಂತ ಕಡಿಮೆ ಅಂದರೆ ಶೇ.10ರಿಂದ 15ರ ವರೆಗೆ ಕಡಿಮೆ ಮೊತ್ತದ ದರದ ಟೆಂಡರ್ ಹಾಕುತ್ತಿದ್ದರು. ಯಾರು ಕಡಿಮೆ ಟೆಂಡರ್ ನಮೂದಿಸುತ್ತಾರೋ ಅವರಿಗೆ ಟೆಂಡರ್ ಆಗುತ್ತಿತ್ತು. ಇದು ಸರ್ಕಾರದ ನಿಯಮ ಕೂಡ. ಕಡಿಮೆ ಬಿಡ್ ಹಾಕಿದಾಗ, ಶೇ.10ರಿಂದ 15ರ ವರೆಗಿನ ಅನುದಾನ ಬಿಟಿಡಿಎಗೆ ಉಳಿಯುತ್ತಿತ್ತು. ಆ ಅನುದಾನದಲ್ಲಿ ಬೇರೆ ಕಾಮಗಾರಿ ಅಥವಾ ಬಿಟಿಡಿಎ ಕಾರ್‌ಪಸ್ ಫಂಡೆಗೆ ವರ್ಗಾಯಿಸುವ ಕೆಲಸ ಆಗುತ್ತಿತ್ತು. ಆದರೆ, ಸದ್ಯ ಬಿಟಿಡಿಎನಲ್ಲಿ 1 ಕೋಟಿ ಮೊತ್ತದ ಕಾಮಗಾರಿಯನ್ನು 1 ಕೋಟಿ ಮೊತ್ತಕ್ಕೆ ಟೆಂಡರ್ ಹಾಕಬೇಕು. ಹಾಗಂತ ಗುತ್ತಿಗೆದಾರರಿಗೆ ಅನಿಯಮಿತ ಫರ್ಮಾನು ಹೋಗಿದ್ದು, ಬಹುತೇಕ ಗುತ್ತಿಗೆದಾರರು, ಎಷ್ಟು ಮೊತ್ತದ ಕಾಮಗಾರಿ ಇರುತ್ತದೆಯೋ, ಅದೇ ಮೊತ್ತಕ್ಕೆ ಬಿಡ್ ಹಾಕುತ್ತಿದ್ದಾರೆ. ಅದೂ ಒಂದು ಕಾಮಗಾರಿಗೆ ಅವರವರೇ ಮಾತನಾಡಿಕೊಂಡು, ಇಬ್ಬರಿಂದ ಮೂವರು ಮಾತ್ರ ಟೆಂಡರ್ ಹಾಕಿ, ಅದರಲ್ಲಿ ಒಬ್ಬರು ಮಾತ್ರ ಟೆಂಡರ್ ಪಡೆಯುತ್ತಾರೆ. ಕಡಿಮೆ ಮೊತ್ತದ ಟೆಂಡರ್ ನಮೂದಿಸುವುದರಿಂದ ಉಳಿಯುತ್ತಿದ್ದ ಹಣ, ಸದ್ಯ ಗುತ್ತಿಗೆದಾರರು, ಅಧಿಕಾರಿಗಳ ಕೈ ಸೇರುತ್ತಿದೆ ಎನ್ನಲಾಗಿದೆ.
ಗುತ್ತಿಗೆದಾರರಲ್ಲೂ ಅಸಮಾಧಾನ: ಬಿಟಿಡಿಎ ಗುತ್ತಿಗೆ ಪಡೆಯುವಲ್ಲಿ ಕೆಲವೇ ಕೆಲವು ಗುತ್ತಿಗೆದಾರರ ಕೈ ಮೇಲಾಗುತ್ತಿದ್ದು, ಇದರಿಂದ ಹಲವಾರು ಗುತ್ತಿಗೆದಾರರೂ ಅಸಮಾಧಾನಗೊಂಡಿದ್ದಾರೆ. ಕೆಲವರು ಧೈರ್ಯ ಮಾಡಿ, ಶೇ.10ರಿಂದ 15ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದರೆ, ಅವರಿಗೆ ಟೆಂಡರ್ ಆದರೂ, ಕಾಮಗಾರಿ ನಡೆಸಲು ಬಿಡುತ್ತಿಲ್ಲ. ಕಾಮಗಾರಿ ಕೈಗೊಂಡರೂ, ಬಿಲ್ ಪಾವತಿಯಾಗಲ್ಲ. ತಮಗೆ ಬೇಕಾದವರಿಗೆ ಮಾತ್ರ ಗುತ್ತಿಗೆ ಆಗಬೇಕು ಎಂಬುದು ಸದ್ಯದ ಅನಿಯಮಿತ ನಿಯಮ ಜಾರಿಯಲ್ಲಿದೆ ಎಂದು ಬಿಟಿಡಿಎ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಖಚಿತಪಡಿಸಿದರು.
ಬಿಟಿಡಿಎಗೆ ಕೋಟ್ಯಂತರ ನಷ್ಟ: ಸದ್ಯ ಬಿಟಿಡಿಎನಲ್ಲಿ ಒಟ್ಟು 137 ಕೋಟಿ ಮೊತ್ತದ 57 ಕಾಮಗಾರಿಗೆ ಟೆಂಡರ್ ಕರೆದಿದ್ದು, ಟೆಂಡರ್ ಹಾಕಲು ಜೂ. 5 ಕೊನೆ ದಿನವಾಗಿತ್ತು. ಕೆಲವೇ ಕೆಲವು ಗುತ್ತಿಗೆದಾರರು, ಮಾತನಾಡಿಕೊಂಡು ಎಷ್ಟು ಮೊತ್ತದ ಕಾಮಗಾರಿ ಇದೆಯೋ ಅದಕ್ಕೆ ಗರಿಷ್ಠ ಶೇ.2 ಮಾತ್ರ ಕಡಿಮೆ ಮೊತ್ತ ನಮೂದಿಸಿ ಟೆಂಡರ್ ಹಾಕಿದ್ದಾರೆ. ಉಳಿದವರು ಕಾಮಗಾರಿ ಮೊತ್ತಕ್ಕಿಂತ ಹೆಚ್ಚಿನ ದರ ನಮೂದಿಸಿ ಟೆಂಡರ್ ಹಾಕಿದ್ದು, ಶೇ.2 ಕಡಿಮೆ ನಮೂದಿಸಿದ ವ್ಯಕ್ತಿಗೆ ಟೆಂಡರ್ ಆಗಲಿದೆ. ಇದರಿಂದ ಶೇ.10ರಿಂದ 15ರಷ್ಟು ಬಿಟಿಡಿಎಗೆ ಉಳಿಯುತ್ತಿದ್ದ ಹಣ ಸದ್ಯ ಯಾರದೋ ಪಾಲಾಗುತ್ತಿದೆ. ಇದರಿಂದ ಬಿಟಿಡಿಎಗೆ ಕೋಟ್ಯಂತರ ನಷ್ಟವಾಗುತ್ತಿದೆ. ಸದ್ಯ 137 ಕೋಟಿ ಮೊತ್ತದ 57 ಕಾಮಗಾರಿಯಲ್ಲಿ ಶೇ.15 ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ಕೊಟ್ಟಿದ್ದರೆ, ಕನಿಷ್ಠ 22 ಕೋಟಿಯಷ್ಟು ಹಣ ಬಿಟಿಡಿಎ ಉಳಿಯುತ್ತಿತ್ತು ಎಂಬುದು ಆ ಅಧಿಕಾರಿಯ ವಿವರಣೆ. ಅಲ್ಲದೇ ಬಿಟಿಡಿಎನಲ್ಲಿ ಟೆಂಡರ್ ಹಾಕುತ್ತಿರುವವರು ಬಹುತೇಕ ವಿಜಯಪುರ ಜಿಲ್ಲೆಯವರಿದ್ದಾರೆ ಎನ್ನಲಾಗಿದೆ. ಯಾವುದೇ ಸರ್ಕಾರ ಬಂದರೂ, ಈ ಗುತ್ತಿಗೆದಾರರ ದರ್ಬಾರ್ ನಡೆಯುತ್ತಲೇ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳು ಮೌನ?: ಬಿಟಿಡಿಎನಲ್ಲಿ ನಾಚೂಕಿನ ಪ್ರಕ್ರಿಯೆಯಿಂದ ಸರ್ಕಾರದ ಅನುದಾನ, ಪೋಲಾಗುತ್ತಿದ್ದರೂ ಸಮರ್ಥ ವಿರೋಧ ಪಕ್ಷ ಎನಿಸಿಕೊಂಡ ಪಕ್ಷಗಳೂ ಮೌನ ವಹಿಸಿವೆ. ಹೀಗಾಗಿ ಅವರೂ ಇದರಲ್ಲಿ ಪಾಲುದಾರರೇ ಎಂಬ ಪ್ರಶ್ನೆ ಕೆಲವರಿಂದ ಕೇಳಿ ಬರುತ್ತಿದೆ. ಇನ್ನು ಅತ್ಯಂತ ಖಡಕ್ ಆಡಳಿತದ ಮೂಲಕ ಹೆಸರುವಾಸಿಯಾದ ಸ್ಥಳೀಯ ಶಾಸಕರಿಗೆ ಇಂತಹ ವಿಷಯ ಗಮನಕ್ಕೆ ಬಂದಿಲ್ಲವೆ. ಬಂದರೆ ಗುತ್ತಿಗೆದಾರರ-ಅಧಿಕಾರಿಗಳ ಈ ನಾಚೂಕಿನ ಪ್ರಕ್ರಿಯೆಗೆ ಸಮ್ಮತ್ತಿಸುತ್ತಾರೆಯೇ ಎಂಬ ಪ್ರಶ್ನೆ ಹಲವು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.
ನವನಗರ ಯೂನಿಟ್-1ಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ 137 ಕೋಟಿ ಮೊತ್ತದ 57 ಕಾಮಗಾರಿಗಳ ಟೆಂಡರ್ ಆಹ್ವಾನಿಸಿದ್ದು, ಟೆಂಡರ್ ಸಲ್ಲಿಕೆಗೆ ಜೂ. 5 ಕೊನೆಯ ದಿನವಾಗಿತ್ತು. ಯಾರು ಕಡಿಮೆ ದರ ನಮೂದಿಸುತ್ತಾರೋ ಅವರಿಗೆ ಟೆಂಡರ್ ಆಗುತ್ತದೆ. ಗುತ್ತಿಗೆದಾರರ ಹೊಂದಾಣಿಕೆ ನಮ್ಮ ವ್ಯಾಪ್ತಿಗೆ ಬರಲ್ಲ. ದರ ನಮೂದಿಸಿದ್ದನ್ನು ನೋಡಿ, ನಿಯಮಾವಳಿ ಪ್ರಕಾರ ಟೆಂಡರ್ ಅಂತಿಮಗೊಳಿಸಲಾಗುತ್ತದೆ. –
ಅಶೋಕ ವಾಸನದ, ಮುಖ್ಯ ಇಂಜಿನಿಯರ್, ಬಿಟಿಡಿಎ
–ಶ್ರೀಶೈಲ ಕೆ. ಬಿರಾದಾರ