ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಷಯದಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉಸ್ತುವಾರಿ ಅರುಣ್ ಸಿಂಗ್ ಅವರು ಏನು ಸಂದೇಶ ತಂದಿದ್ದಾರೆ ಎಂಬುದನ್ನು ನೋಡೋಣ ಎಂದರು.
ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಪಕ್ಷದ ಸಭೆಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮುಂಬರುವ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭಾ ಉಪಚುನಾವಣೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ:ಬೆಳಗಾವಿ ಜಿಲ್ಲೆ ವಿಭಜನೆ ಅತ್ಯಂತ ಅವಶ್ಯಕ: ಸಚಿವ ರಮೇಶ್ ಜಾರಕಿಹೊಳಿ
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಈಗ ಮತ್ತೆ ಎರಡು ವಿಧಾನಸಭೆ, ಒಂದು ಲೋಕಸಭಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಗೆಲ್ಲಬೇಕಿದೆ ಎಂದು ಹೇಳಿದರು.
ಬೆಳಗಾವಿಯ ಕಾರ್ಯಕಾರಿಣಿಯಲ್ಲಿ ಪಕ್ಷದ ಸಂಘಟನೆಯ ಜೊತೆಗೆ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಚರ್ಚೆ ನಡೆಯಲಿವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬೆಳಗಾವಿ ಜಿಲ್ಲಾ ವಿಭಜನೆಯ ಪ್ರಸ್ತಾಪ ಸರಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಮುಖ್ಯಮಂತ್ರಿಗಳು ನಿರಾಕರಿಸಿದರು.