ವಿಧಾನಸಭೆ: ಕೋವಿಡ್ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವನ್ನು ಮಾಜಿ ಸಿಎಂ ಯಡಿಯೂರಪ್ಪ ಶ್ಲಾಘಿಸಿದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೋದಿ ಕಾರ್ಯದ ಬಗ್ಗೆ ವ್ಯಂಗ್ಯವಾಡಿ, ಮೂಢ ನಂಬಿಕೆ ಬಿತ್ತುವ ಪ್ರಧಾನಿ ಎಂದು ಆರೋಪಿಸಿದರು.
ಕೋವಿಡ್ ವಿಚಾರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ದೇಶದಲ್ಲಿ ಕೋವಿಡ್ ನಿಯಂತ್ರಿಸಿರುವುದಕ್ಕೆ ಡಬ್ಲ್ಯೂ ಎಚ್‌ಒ, ಯುಎನ್‌ಒ ಪ್ರಧಾನಿ ನರೇಂದ್ರ ಮೋದಿ ಕಾರ್ಯವನ್ನು ಶ್ಲಾಘಿಸಿವೆ. ಭಾರತ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ಜಗತ್ತು ದೊಡ್ಡ ನಾಯಕ ಎಂದು ಪರಿಗಣಿಸಿದೆ. ಇಂತ ದೊಡ್ಡ ವ್ಯಕ್ತಿ ನಮಗೆ ಸಿಕ್ಕಿರುವುದು ನಮ್ಮ ಗೌರವ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ. ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ಕಾರ್ಯದ ಬಗ್ಗೆ ಇಡೀ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ನಾದರೂ ಅವರ ಹೆಸರು ಹೇಳುವಾಗ ಹತ್ತುಬಾರಿ ಯೋಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯಗಳ ಒತ್ತಾಯದಿಂದಲೇ ಪೆಟ್ರೋಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲ: ಸಚಿವ ಪುರಿ
ಅವರ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಪ್ರಧಾನಿ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಅಷ್ಟೆಲ್ಲ ಕೆಲಸ ಮಾಡಿದ್ದರೆ ದೇಶದಲ್ಲಿ ಕೋವಿಡ್ ಕಡಿಮೆಯಾಗಿದಿಯಾ ? ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ದೀಪಾ ಹಚ್ಚಿ ಎಂದು ಹೇಳಿರುವುದರಿಂದ ಕೋವಿಡ್ ಕಡಿಮೆಯಾಗಿದಿಯಾ ಎಂದು ಪ್ರಶ್ನಿಸಿದರು.
ಮೋದಿ ಹೇಳಿದ ತಕ್ಷಣ ಕೋವಿಡ್ ಕಡಿಮೆಯಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೋದಿ ಆಟ ನಡೆಯುವುದಿಲ್ಲ. ಮೂಢ ನಂಬಿಕೆ ಬಿತ್ತುವ ಪ್ರಧಾನಿಯನ್ನು ಬೆಂಬಲಿಸಬೇಕಾ ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕರ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪಿಸಿ ಪ್ರಧಾನಿ ವಿರುದ್ಧ ಮಾತನಾಡಿರುವ ಪದವನ್ನು ತೆಗೆದು ಹಾಕುವಂತೆ ಆಗ್ರಹಿಸಿದರು.