Advertisement

ಆಪರೇಷನ್‌ ಕಮಲದ ಪಿತಾಮಹ ಬಿಎಸ್‌ವೈ

09:54 AM Nov 24, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಆಪರೇಷನ್‌ ಕಮಲದ ಪಿತಾಮಹ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಶವಂತಪುರದ ಅಭ್ಯರ್ಥಿ ಪಿ. ನಾಗರಾಜ್‌ ಹಾಗೂ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಶಿವರಾಜ್‌ ಪರ ಪ್ರಚಾರ ನಡೆಸಿದ ಅವರು, ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಆಪರೇಷನ್‌ ಕಮಲ ಮಾಡಿದ್ದರು. ಈಗಲೂ ಕಾಂಗ್ರೆಸ್‌ ಶಾಸಕರನ್ನು ಮತ್ತೆ ಸೆಳೆದುಕೊಳ್ಳುವ ಮೂಲಕ ಆಪರೇಷನ್‌ ಕಮಲ ಮಾಡಿದ್ದಾರೆ ಎಂದರು.

Advertisement

ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ ಅವರನ್ನು ಎಸ್‌ಬಿಎಂ ಎಂದು ಕರೆಯುತ್ತಿದ್ದರು. ಅವರು ನನ್ನ ಜೊತೆಗೆ ಚೆನ್ನಾಗಿಯೇ ಇದ್ದರು. ಇವರ ಜೊತೆಗೆ ರೋಷನ್‌ ಬೇಗ್‌ ಸೇರಿ ಬೆಂಗಳೂರು ಶಾಸಕರಿಗೆ 3 ರಿಂದ 4 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಆದರೆ, ಅಂತಿಮವಾಗಿ ಉಂಡೂ ಹೋದ ಕೊಂಡೂ ಹೋದ ಎನ್ನುವ ಹಾಗೆ ಅವರು ಬಿಜೆಪಿಗೆ ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನರು ಪಾಠ ಕಲಿಸಬೇಕು. ಇದರಿಂದ ದೇಶಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕಪ್ಪು ಹಣಕ್ಕೆ ಬ್ರೇಕ್‌ ಹಾಕುತ್ತೇನೆ ಎಂದು ಹೇಳಿದ್ದರು. ಆದರೆ, ಯಡಿಯೂರಪ್ಪ ಆಪರೇಷನ್‌ ಕಮಲ ಮಾಡಿ ಶಾಸಕರಿಗೆ 25ರಿಂದ 30 ಕೋಟಿ ಕೊಟ್ಟಿರುವುದು ಯಾವ ದುಡ್ಡು? ಅದು ಹೇಗೆ ಬಂತು ಎಂದು ಪ್ರಶ್ನಿಸಿದರು. ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದವರೆ ಲ್ಲರನ್ನೂ ಜನರು ಸೋಲಿಸಿದ್ದಾರೆ. ರಾಜ್ಯದಲ್ಲಿಯೂ 17 ಜನ ಅನರ್ಹರಿದ್ದಾರೆ. ಅವರಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲುತ್ತದೆ ಎಂದರು.

ಅನ್ನ ಭಾಗ್ಯ 10 ಕೆಜಿ: ಇದೇ ವೇಳೆ, ಅನ್ನಭಾಗ್ಯ ಯೋಜನೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಆಗ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣವನ್ನು 10 ಕೆ.ಜಿ.ಗೆ ಏರಿಸಲಾಗುವುದು. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಏಳು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಈಗ ಬಿಜೆಪಿ ಸರ್ಕಾರ 4 ಕೆಜಿ ಮಾತ್ರ ನೀಡುತ್ತಿದೆ. ಸರ್ಕಾರ ಬಡವರಿಗೆ ನೀಡುತ್ತಿರುವ ಅಕ್ಕಿ ಕಡಿಮೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಏಕಾಂಗಿಯಲ್ಲ: ಕಾಂಗ್ರೆಸ್‌ನಲ್ಲಿ ತಾವು ಏಕಾಂಗಿ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕ ರಿಗೆ ತಿರುಗೇಟು ನೀಡಿದ ಅವರು, ನಾನು ಏಕಾಂಗಿಯಲ್ಲ. ನನ್ನ ಬಗ್ಗೆ ಬಿಜೆಪಿಯವರಿಗೆ ಭಯ. ಹೀಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಜೊತೆ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್‌ ನಾಯಕರಿದ್ದರು. ಅವರೆಲ್ಲ ಜೊತೆಯಲ್ಲಿದ್ದಾಗ ನಾನೇಕೆ ಏಕಾಂಗಿಯಾಗಲಿ ಎಂದು ಪ್ರಶ್ನಿಸಿದರು.

Advertisement

ಕರೆ ಮಾಡಿ ಹೋರಾಟದ ಎಚ್ಚರಿಕೆ: ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್‌ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸ್ಥಳೀಯ ಪೊಲೀಸರು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದ ಕಾರ್ಯಕ್ರಮದ ವೇದಿಕೆಯಿಂದಲೇ ಬೆಂಗಳೂರು ನಗರ ಪೊಲಿಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರಿಗೆ ದೂರವಾಣಿ ಕರೆ ಮಾಡಿ, ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಾಂಗ್ರೆಸ್‌ ಪರ ಪ್ರಚಾರ ಮಾಡದಂತೆ ಬೆದರಿಕೆ ಹಾಕುತ್ತಿದ್ದಾರೆ.

ಸ್ಥಳೀಯ ಪೊಲೀಸರು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಅದನ್ನು ಸರಿಪಡಿಸಿ ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಮಾಡಿಕೊಡಿ ಎಂದು ಸೂಚನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪೊಲೀಸರ ದಬ್ಬಾಳಿಕೆ ಸರಿಯಲ್ಲ. ಈ ಬಗ್ಗೆ ಈಗಾಗಲೇ ದೂರು ನೀಡಿದ್ದೇವೆ. ಇದೇ ರೀತಿ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next