Advertisement
ಸಾಮಾನ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾಗಲೀ ಎಚ್.ಡಿ. ಕುಮಾರಸ್ವಾಮಿ ಯವರಾಗಲೀ ಯಾರನ್ನೂ ಸುಮ್ಮನೆ ಭೇಟಿ ಮಾಡುವುದಿಲ್ಲ. ಒಂದೊಮ್ಮೆ ಭೇಟಿಯಾದರೆ ಅಲ್ಲಿ “ರಾಜಕೀಯ’ ಇದ್ದೇ ಇರುತ್ತದೆ. ಎಚ್ ಡಿಕೆ ಮತ್ತು ಬಿಎ ಸ್‌ವೈ ಅವರ ಭೇಟಿಯ ಹಿಂದೆಯೂ ಸಂದೇಶ ರವಾನೆಯ ರಾಜಕೀಯ ಕಾರ್ಯತಂತ್ರವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಜೆಡಿಎಸ್ ಶಾಸಕರು ಕೂಡ ಯಡಿಯೂರಪ್ಪ ಮತ್ತು ಬಿಜೆಪಿ ಜತೆ ಸಂಬಂಧ ಸುಧಾರಣೆ ಮಾಡಿಕೊಳ್ಳುವಂತೆ ಕುಮಾರಸ್ವಾಮಿಯವರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಇಬ್ಬರಿಗೂ ಆತ್ಮೀಯರಾದ ಪ್ರಸ್ತುತ ಬಿಜೆಪಿಯಲ್ಲಿ ಇರುವ ಜನತಾಪರಿವಾರದ ನಾಯಕರೊಬ್ಬರು ಇದಕ್ಕೆ ಕೊಂಡಿಯಾಗಿ ಪೌರೋಹಿತ್ಯ ವಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಸಂಕಷ್ಟ ಎದುರಾದರೆ ಜತೆಗೆ ನಿಲ್ಲುವ ಭರವಸೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಗುದ್ದಾಟ -ಆತ್ಮೀಯತೆ 2013ರ ವಿಧಾನಸಭೆ ಚುನಾವಣೆ ಅನಂತರ ಬಿಜೆಪಿ ಸರಕಾರ ರಚನೆ ತಪ್ಪಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗ ಯಡಿಯೂರಪ್ಪ ವಿಧಾನಸಭೆಯಲ್ಲೇ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ ಬಳಿಕವೂ ಕುಮಾರಸ್ವಾಮಿಯವರು ಯಡಿಯೂರಪ್ಪ ವಿರುದ್ಧ ಸಮಯ ಬಂದಾಗ ಕುಟುಕುತ್ತಿದ್ದರು.
ಆದರೆ ಕೋವಿಡ್ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಕಾರ ಮತ್ತು ಸಿಎಂ ಮೇಲೆ ಮುಗಿಬಿದ್ದಾಗ “ಜನರ ಆರೋಗ್ಯ ಮುಖ್ಯ, ರಾಜಕೀಯ ಬಿಡಿ’ ಎಂದು ಸಲಹೆ ನೀಡುವ ಮೂಲಕ ಕುಮಾರಸ್ವಾಮಿ ಸರಕಾರದ ಪರ ನಿಂತಿದ್ದರು. ಯಡಿಯೂರಪ್ಪ ಅವರೂ ಕುಮಾರಸ್ವಾಮಿಯವರು ಒಳ್ಳೆಯ ಮಾತನಾಡಿದ್ದಾರೆ. ಅವರು ಸರಕಾರದ ಕೆಲಸವನ್ನು ಮೆಚ್ಚಿದಂತಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಬೇರೆ ಬೆಳವಣಿಗೆಗೆ ಸಾಕ್ಷಿ ಸಾಧ್ಯತೆರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಿ ಸರಕಾರಕ್ಕೆ ಗಂಡಾಂತರ ಎದುರಾದರೆ ಜೆಡಿಎಸ್ -ಬಿಜೆಪಿ ಒಂದಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದರ ಬೆನ್ನಲ್ಲೇ ಎಚ್.ಡಿ. ಕುಮಾರಸ್ವಾಮಿಯವರು “ನನಗೆ ಬಿಜೆಪಿಗಿಂತ ಕಾಂಗ್ರೆಸ್ ಮೊದಲ ಶತ್ರು’ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಬಿಜೆಪಿಯ ಕೇಂದ್ರ ನಾಯಕರು ಕುಮಾರಸ್ವಾಮಿ ಸಂಪರ್ಕದಲ್ಲಿ ನಿರಂತರವಾಗಿ ಇರುವುದು ಗುಟ್ಟೇನಲ್ಲ. ಆದರೆ ಈಗ ದಿಢೀರ್ ಎಂಬಂತೆ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಒಂದಾಗುವ ಲಕ್ಷಣಗಳು ಕಂಡುಬರುತ್ತಿರುವುದು ಬೇರೆಯದೇ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.