ಪಣಜಿ: ಮಹದಾಯಿ ನೀರು ಹಂಚಿಕೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಗೋವಾ ಸಿಎಂ ಪ್ರಮೋದ ಸಾವಂತ್ ಹೇಳಿಕೆ ಹಿನ್ನೆಲೆಯಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪ ಸೆ.16- 17ರಂದು ಗೋವಾ ಸಿಎಂ ಜತೆ ಸಮಯ ನಿಗ ದಿಪಡಿಸಿದ್ದನ್ನು ರದ್ದುಗೊಳಿಸಲಾಗಿದೆ. ಮಹದಾಯಿ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಕುರಿತಂತೆ ಸಿಎಂ ಬಿಎಸ್‌ವೈ ಸಿದ್ಧತೆ ನಡೆಸಿದ್ದು, ಕೊನೇ ಕ್ಷಣದಲ್ಲಿ ಗೋವಾ ಸಿಎಂ ಹೇಳಿಕೆ ನಂತರ ಮಾತುಕತೆ ರದ್ದುಗೊಳಿಸಲಾಗಿದೆ.
ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ರಾಜಿ ಇಲ್ಲ ಅಂದ ಮೇಲೆ ಚರ್ಚಿಸುವುದು ಹೇಗೆ, ರಾಜ್ಯ ಸರ್ಕಾರದ ನಿರ್ಣಯ ದೃಢವಾಗಿದೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಪ್ರಕರಣದಲ್ಲಿ ಗೋವಾಕ್ಕೆ ನ್ಯಾಯ ಸಿಗಲಿದೆ ಎಂದು ಗೋವಾ ಸಿಎಂ ಹೇಳಿದ್ದರು.
ಕರ್ನಾಟಕದ ಜತೆ ಗೋವಾಕ್ಕೆ ಮಹದಾಯಿ ವಿಷಯ ದ ಮಾತುಕತೆಗೆ ಗೋವಾ ವಿರೋಧ ಪಕ್ಷಗಳು ಆಕ್ಷೇಪಿಸಿ ದ್ದವು. ಮಹದಾಯಿ ಪ್ರಕರಣ ನ್ಯಾಯಾಲಯದಲ್ಲಿರುವಾಗ ಮುಖ್ಯಮಂತ್ರಿಗಳು ಯಾವುದೇ ಚರ್ಚೆ ನಡೆಸಬಾರದು ಎಂದು ಗೋವಾ ಕಾಂಗ್ರೆಸ್ ಮತ್ತು ಎಂಜಿಪಿ ಮುಖ್ಯ ಮಂತ್ರಿ ಸಾವಂತ್ ಬಳಿ ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಸಿಎಂ ತಟಸ್ಥ ನೀತಿ ಅನುಸರಿಸಿದ್ದರು.
ಕೇಂದ್ರ ಜಲಶಕ್ತಿ ಸಚಿವರ ಜತೆ ಮಹದಾಯಿ ಚರ್ಚೆ
ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಜಲಶಕ್ತಿ ಖಾತೆ ಸಚಿವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ನಿವಾರಣೆ ಹಾಗೂ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಮಾತುಕತೆ ಮಾಡು ವಂತೆ ಗೋವಾ ಸಿಎಂ ಪ್ರಮೋದ ಸಾವಂತ ಹಾಗೂ ರಾಜ್ಯದ ಸಿಎಂ ಯಡಿಯೂರಪ್ಪ ಅವರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೆ.
ಇದಕ್ಕೆ ಗೋವಾ ಸಿಎಂ ಪ್ರಮೋದ ಸಾವಂತ ಒಪ್ಪಿಕೊಂಡಿದ್ದರು. ಆದರೆ ಇದೀಗ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವುದು ನೋಡಿದರೆ ಸ್ಥಳೀಯ ರಾಜಕಾರಣ ಇರಬಹುದು ಎನ್ನಿಸುತ್ತಿದೆ ಎಂದರು. ಮಹದಾಯಿ ಯೋಜನೆ ಕುರಿತು ಈಗಾಗಲೇ ನ್ಯಾಯಾಧಿಕರಣ ತೀರ್ಪು ನೀಡಿದೆ. ಅಧಿಸೂಚನೆ ಹೊರಡಿಸುವುದು ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಮಾತನಾಡುವ ಕುರಿತು ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.