ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಹೆಚ್ಚು ಬಲಗೊಳಿಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಶಿಕಾರಿಪುರ ಬಿಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಶನಿವಾರ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಸಲಹೆ ಮಾಡಿದ್ದು, ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹದಾಯಿ ವಿವಾದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ. ಅಲ್ಲದೆ ಆ ಭಾಗದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇತ್ತೀಚೆಗೆ ಉಂಟಾಗಿರುವ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದವೂ ಪಕ್ಷಕ್ಕೆ ಕೊಂಚ ಮಟ್ಟಿಗೆ ಪೆಟ್ಟು ನೀಡಿದೆ. ಇನ್ನೊಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಆ ಭಾಗಕ್ಕೆ ಆದ್ಯತೆ ನೀಡುವ ಸಲುವಾಗಿ ಧಾರವಾಡದಲ್ಲಿ ಮನೆ ಮಾಡಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕಣಕ್ಕಿಳಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮೊದಲೇ ಸೂಚನೆ ಸಿಕ್ಕಿತ್ತು: ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸುವ ಬಗ್ಗೆ ಅಮಿತ್ ಶಾ ಅವರು ಮೊದಲೇ ಯೋಚಿಸಿದ್ದರು ಎನ್ನಲಾಗಿದೆ. ಅದರಂತೆ ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಚುನಾವಣಾ ಉಸ್ತುವಾರಿ ಪಿಯೂಷ್ ಗೋಯೆಲ್ ಅವರು ಈ ಕುರಿತು ಪ್ರಸ್ತಾಪ ಮಾಡಿದ್ದರು. ಅದೇ ವೇಳೆ ಅಮಿತ್ ಶಾ ಅವರೂ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಈ ಕುರಿತು ಚರ್ಚಿಸಿದರು ಎನ್ನಲಾಗಿದೆ.
“ಶಿಕಾರಿಪುರ ಕ್ಷೇತ್ರದ ಬಗ್ಗೆ ನಿಮಗಿರುವ ಅಭಿಮಾನ, ಅಲ್ಲಿನ ಜನರೊಂದಿಗೆ ನಿಮ್ಮ ಬಾಂಧವ್ಯದ ವಿಚಾರ ನಮಗೆ ಗೊತ್ತಿದೆ. ನೀವು ಅಲ್ಲಿ ಬೇರೆಯವರನ್ನು ಕಣಕ್ಕಿಳಿಸಿದರೂ ಗೆಲ್ಲಿಸಿಕೊಂಡು ಬರುತ್ತೀರಿ. ಆದರೆ, ಉತ್ತರ ಕರ್ನಾಟಕ ಭಾಗದಿಂದ ನೀವು ಸ್ಪರ್ಧಿಸಿದರೆ ಆ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು’ ಎಂದು ಅಮಿತ್ ಶಾ ಪ್ರಶ್ನಿಸಿದರೆನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ನನಗೆ ಪಕ್ಷದ ಗೆಲುವು ಮುಖ್ಯ. ಆದ್ದರಿಂದ ನೀವು ಏನು ನಿರ್ಧಾರ ಕೈಗೊಳ್ಳುತ್ತೀರೋ ಅದಕ್ಕೆ ಬದ್ಧನಾಗಿರುತ್ತೇನೆ. ನೀವು ಸೂಚಿಸಿದರೆ ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ’ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.