ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದತ್ತ ಹೆಚ್ಚಿನ ಒಲವು ತೋರಿಸುತ್ತಿರುವ ಕಾರಣ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ವಿಲೀನವಾಗಲಿದೆ ಎಂಬ ಸುದ್ದಿಗೆ ಸಿಎಂ ಯಡಿಯೂರಪ್ಪ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಿಎಂ ಬಿಎಸ್ ವೈ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರಷ್ಟೇ. ಆದರೆ ಯಾವುದೇ ಜೆಡಿಎಸ್ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆಡಿಎಸ್ ಪಕ್ಷವನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳಿಸುವಂತಹ ಗೊಂದಲಗಳ ವರದಿಗಳು ಶುದ್ಧ ಸುಳ್ಳು. ಅಂತಹ ಯಾವುದೇ ಸಂದರ್ಭ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪರಿಷತ್ ಸಭಾಪತಿ ವಿಚಾರದಲ್ಲಿ ಮಾತ್ರ ಕುಮಾರಸ್ವಾಮಿಯವರು ನಮಗೆ ಸಹಕಾರ ನೀಡುತ್ತಿದ್ದಾರೆಯೇ ವಿನ: ಮತ್ತೇನೂ ಇಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಬೆಂಬಲವಿಲ್ಲ ಎಂದು ಸಹ ಕುಮಾರಸ್ವಾಮಿ ಸ್ಪಷ್ಠವಾಗಿ ಹೇಳಿದ್ದಾರೆ. ವಿಧಾನಸಭೆಗೆ ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ವಿಲೀನದ ಬಗೆಗಿನ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.
ಸುಗ್ರೀವಾಜ್ಞೆ: ಗೋಹತ್ಯೆ ನಿಷೇಧ ವಿಧೇಯಕಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ ಕಾರಣ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿಗೆ ತರುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ಪರಿಷತ್ ನಲ್ಲಿ ಮಂಡನೆಗೆ ಅವಕಾಶ ಸಿಕ್ಕಿರಲಿಲ್ಲ. ಜೆಡಿಎಸ್ ಕೂಡಾ ವಿರೋಧ ವ್ಯಕ್ತಪಡಿಸಿದ ಕಾರಣ ಸರ್ಕಾರಕ್ಕೆ ಪರಿಷತ್ ನಲ್ಲಿ ಬಹುಮತದ ಕೊರತೆ ಕಾಡಲಿದೆ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರಲು ಸರ್ಕಾರ ಮುಂದಾಗಿದೆ.