Advertisement

ಬಿಎಸ್‌ವೈ ಆಡಿಯೋ: ರಾಷ್ಟ್ರಪತಿ ಭೇಟಿಗೆ ಅವಕಾಶ ಕೋರಿದ್ದೇವೆ

10:10 PM Nov 08, 2019 | Lakshmi GovindaRaju |

ಮೈಸೂರು: ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಡಿಯೋ ಸಂಬಂಧ ರಾಷ್ಟ್ರಪತಿಗಳಿಗೆ ದೂರು ನೀಡಲು ಸಮಯ ಕೋರಲಾಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಕಚೇರಿಯಿಂದ ಭೇಟಿಗೆ ಕಾಲಾವಕಾಶ ದೊರೆತರೆ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ವಜಾಗೊಳಿಸುವಂತೆ ದೂರು ನೀಡುತ್ತೇವೆ ಎಂದು ಹೇಳಿದರು.

ಬಿಜೆಪಿಯ ಕೋರ್‌ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ, ಆಪರೇಷನ್‌ ಕಮಲಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಹೇಳಿರುವ ಆಡಿಯೋ ವೈರಲ್‌ ಆಗಿದೆ. ಅಮಿತ್‌ ಶಾ ಅವರ ಸೂಚನೆಯಂತೆ ಆಪರೇಷನ್‌ ಕಮಲ ಮಾಡಿರುವುದಾಗಿ ಯಡಿಯೂರಪ್ಪ ಆಡಿಯೋದಲ್ಲಿ ಹೇಳಿದ್ದಾರೆ. ಆಪರೇಷನ್‌ ಕಮಲ ಮಾಡಿರುವ ಅಮಿತ್‌ ಶಾ ಮಂತ್ರಿಯಾಗಿರಬಾರದು, ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು. ಹೀಗಾಗಿ ಇವರಿಬ್ಬರನ್ನೂ ವಜಾಗೊಳಿಸಿ ಎಂದು ರಾಷ್ಟ್ರಪತಿಯವರಿಗೆ ದೂರು ನೀಡುತ್ತೇವೆ ಎಂದರು.

ಅನರ್ಹರ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಚುನಾವಣೆ ಮುಂದೂಡುವ ಅರ್ಜಿಗೆ ಆಕ್ಷೇಪ ಸಲ್ಲಿಸಲು ನಮ್ಮ ವಕೀಲರಿಗೆ ತಿಳಿಸಿದ್ದೇವೆ. ಈ ವಿಚಾರದಲ್ಲಿ ಜೆಡಿಎಸ್‌ನವರು ಹೋರಾಟ ಮಾಡ್ತಾರೋ, ಬಿಡ್ತಾರೋ ಅವರನ್ನೆ ಕೇಳಿ ಎಂದ ಅವರು, ಜೆಡಿಎಸ್‌ನವರು ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರೋ ಹಾರ್ಡ್‌ ಆಗಿದ್ದಾರೋ ಅನ್ನೋದನ್ನು ಅವರನ್ನೇ ಕೇಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಟಿಪ್ಪು ಜಯಂತಿಗೆ ವಿರೋಧ ಸಲ್ಲದು: ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಜನರ ವಿರೋಧವಿಲ್ಲ. ನ್ಯಾಯಾಲಯ ಕೂಡ ಖಾಸಗಿಯಾಗಿ ಆಚರಣೆಗೆ ಅಡ್ಡಿ ಇಲ್ಲ ಎಂದು ಹೇಳಿದೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ದಾರವಿಲ್ಲದೆ ಬುಗುರಿ ಆಡಿಸುತ್ತಿದೆ. ಟಿಪ್ಪು ಜಯಂತಿ ಆಚರಿಸಿದರೆ ಗಲಾಟೆ ಆಗುವುದಿಲ್ಲ.

Advertisement

ನಮ್ಮ ಸರ್ಕಾರದ ಅವಧಿಯಲ್ಲಿ ಮೂರು ವರ್ಷ ಟಿಪ್ಪುಜಯಂತಿ ಆಚರಿಸಲಿಲ್ಲವೇ, ಕೊಡಗಿನಲ್ಲಿ ಪೊಲೀಸರ ಬೇಜವಾಬ್ದಾರಿತನದಿಂದ ಗಲಾಟೆಯಾಗಿದ್ದು ಬಿಟ್ಟರೆ, ಉಳಿದೆಡೆ ಯಾವ ಗಲಾಟೆಯೂ ಇಲ್ಲದೇ ಚೆನ್ನಾಗಿ ನಡೆದಿದೆ. ಮೈಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡದ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ, ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

“ಡಿಕೆಶಿ ಸಿಎಂ’ ಹೇಳಿಕೆಯಲ್ಲಿ ತಪ್ಪಿಲ್ಲ: ಅಭಿನಂದನಾ ಸಮಾರಂಭದಲ್ಲಿ ಕೆಲವರು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಲಿ ಎಂದಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಹೀಗಾಗಿ ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯ ಇರುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಮೈಸೂರಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್‌, ಇಲ್ಲಿನ ಕಾಂಗ್ರೆಸ್‌ ಕಚೇರಿಗೂ ಬಂದಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next