Advertisement

ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಶಾಶ್ವತ ಬೀಗ!

06:39 PM Feb 26, 2021 | Team Udayavani |

ಬೀದರ: ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಕರ್ನಾಟಕದ ಅತಿ ಹಳೆಯ ಸಕ್ಕರೆ ಕಾರ್ಖಾನೆ. ದಶಕಗಳಿಂದ ಗಡಿ ನಾಡು ಬೀದರ ರೈತರ ಮತ್ತು ಕಾರ್ಮಿಕರ ಜೀವನಾಡಿ ಆಗಿದ್ದ ಈ ಸಂಸ್ಥೆಗೆ ಈಗ ಆರ್ಥಿಕ ಸಂಕಷ್ಟದಿಂದ ಬೀಗ ಬಿದ್ದಿದೆ. ಸರ್ಕಾರಗಳು ಬದಲಾದರೂ ಕಾರ್ಖಾನೆಯ ಪುನಃಶ್ಚೇತನದ ಭರವಸೆ ಮಾತ್ರ ಈಡೆರಲೇ ಇಲ್ಲ. ಇದಕ್ಕೆ ರಾಜಕೀಯ ನಾಯಕರ ಇಚ್ಛಾಶಕ್ತಿ ಮತ್ತು ಸಮರ್ಥ ನಾಯಕತ್ವದ ಕೊರತೆ ಮೂಲ ಕಾರಣ.

Advertisement

ಕಳೆದ ವಿಧಾನಸಭೆ ಚುನಾವಣೆ ವೇಳೆ ಎಲ್ಲ ಪಕ್ಷಗಳು ಬಿಎಸ್‌ಎಸ್‌ಕೆ ಆರಂಭ ವಿಷಯವನ್ನೇ ಚುನಾವಣಾ ಪ್ರಚಾರಕ್ಕೆ ಅಸ್ತ್ರವಾಗಿ ಬಳಸಿಕೊಂಡಿದ್ದವು. ಅದೇ ರೀತಿ ಸಿಎಂ ಯಡಿಯೂರಪ್ಪ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ 50 ಕೋಟಿ ರೂ. ಪ್ಯಾಕೇಜ್‌ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಆಡಳಿತಕ್ಕೆ ಬಂದ ಮೇಲೆ ಮೌನವಾಗಿದ್ದಾರೆ. ಅಷ್ಟೇ ಅಲ್ಲ ಹಿಂದೆ ಸಕ್ಕರೆ ಸಚಿವರಾಗಿದ್ದ ಸಿ.ಟಿ ರವಿ ಅವರು ಬಿಎಸ್‌ಎಸ್‌ಕೆಗೆ ಹಣದ ನೆರವು ನೀಡುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ, ಸಾಲ ಕೊಟ್ಟರೂ ಸಹ ಯಾವುದೇ ಉದ್ಧಾರ ಆಗುವ ಲಕ್ಷಣಗಳಿಲ್ಲ ಎಂದು ಹೇಳಿಕೆ ನೀಡಿದ್ದರು.

ಹಾಗಾಗಿ ಒಂದು ಕಾಲದಲ್ಲಿ ಜಿಲ್ಲೆಯ ಜನರ ಬದುಕಿನ ಭಾಗವಾಗಿದ್ದ ಸಂಸ್ಥೆ ಶಾಶ್ವತವಾಗಿ ಬಾಗಿಲು ಮುಚ್ಚಿಕೊಳ್ಳುತ್ತಾ ಎಂಬ ಆತಂಕ ಕಬ್ಬು ಬೆಳೆಗಾರರಲ್ಲಿ ಹೆಚ್ಚಿಸಿದೆ. ಆರು ದಶಕಗಳ ಹಿಂದೆ ಸ್ಥಾಪಿತಗೊಂಡು ರಾಜ್ಯದಲ್ಲೇ ಹಳೆಯ ಮತ್ತು ಅತ್ಯುತ್ತಮ ಕಾರ್ಖಾನೆ ಎನಿಸಿಕೊಂಡಿದ್ದ ಬಿಎಸ್‌ಎಸ್‌ಕೆ ಈಗ ಅಂದಾಜು 300 ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಹೊತ್ತಿದೆ. ಸದ್ಯ ಕಾರ್ಖಾನೆಯ ಆಸ್ತಿಗಿಂತಲೂ ಅದರ ಸಾಲವೇ ಅಧಿಕವಾಗಿದೆ.

ಪ್ರತಿ ವರ್ಷ ಸಾಲದ ಮೇಲೆ ಸುಮಾರು 30 ಕೋಟಿ ರೂ. ಬಡ್ಡಿ ಆಗುತ್ತಿದ್ದರೆ ಇತ್ತ ಕಾರ್ಮಿಕರು ವೇತನ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಕಾರ್ಖಾನೆಯ
ಆಧುನೀಕರಣಕ್ಕೆ ನಿರಾಸಕ್ತಿ, ಆಡಳಿತ ವರ್ಗದ ಲೋಪ ಮತ್ತು ಭ್ರಷ್ಟಾಚಾರ ಸೇರಿ ಅನೇಕ ಕಾರಣಗಳಿಂದ ಈ ದುಸ್ಥಿತಿಗೆ ತಲುಪಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ಪುನಃಶ್ವೇತನಕ್ಕಾಗಿ 20 ಕೋಟಿ ರೂ. ಅನುದಾನ ನೀಡಿತ್ತಾದರೂ ಯಾವುದೇ ಲಾಭ ಆಗಲಿಲ್ಲ.

ಮತ್ತೂಂದೆಡೆ ಬಿಎಸ್‌ಎಸ್‌ಕೆಯ ಆರ್ಥಿಕ ಸ್ಥಿತಿಯಿಂದಾಗಿ ಸಾಲ ನೀಡಿರುವ ಡಿಸಿಸಿ ಬ್ಯಾಂಕ್‌, ಅಪೆಕ್ಸ್‌ ಬ್ಯಾಂಕ್‌ಗೂ ಸಹ ಅಸಲು-ಬಡ್ಡಿ ಹೇಗೆ ಬರುತ್ತದೆ ಎಂಬ ಭಯ ಕಾಡುತ್ತಿದೆ. ಸರ್ಕಾರ ವಿಶೇಷ ಪ್ಯಾಕೇಜ್‌ನ ನೆರವು ನೀಡದೆ ಕೈಚಲ್ಲಿ ಕುಳಿತಿರುವುದು ಕಾರ್ಮಿಕರು ಮತ್ತು ಬ್ಯಾಂಕ್‌ಗಳ ಸಂಕಷ್ಟ ದುಪ್ಪಟ್ಟುಗೊಳಿಸಿದೆ.

Advertisement

ಬಿಎಸ್‌ಎಸ್‌ಕೆ ಕಾರ್ಖಾನೆ ಸಾಲದ ಹಣವನ್ನು ಷೇರಿಗೆ ಪರಿವರ್ತಿಸಿ, ವಿಶೇಷ ಅನುದಾನ ಕಲ್ಪಿಸಿ ರೈತರ ಹಿತ ಕಾಪಾಡಬೇಕು ಎಂಬುದು ರೈತ ಸಂಘಟನೆಗಳು ಒತ್ತಾಯಿಸಿದ್ದರೆ, ಕೆಲವರು ಮೈಸೂರು ಶುಗರ್‌, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ಬಿಎಸ್‌ ಎಸ್‌ಕೆಯನ್ನು ಸಹ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಪುನಾರಂಭಿಸಲಿ ಎಂಬ ಬೇಡಿಕೆ ಇದೆ. ಇನ್ನು ರೈತರು ಯಾರಾದರೂ ನಡೆಸಲಿ ಕಬ್ಬು ಕ್ರಷಿಂಗ್‌ ಆರಂಭಗೊಂಡರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ.

ಬಿಎಸ್‌ಎಸ್‌ಕೆ ಕಬ್ಬು ನುರಿಸುವಕೆ ನಿಲ್ಲಿಸಿದ ಕಾರಣ ಸದ್ಯ ನಿರುಪಯುಕ್ತ ಎನಿಸಿದೆ. ನೂರಾರು ಕೋಟಿ ರೂ. ವ್ಯಯಿಸಿರುವ ಕಾರ್ಖಾನೆ ಹೀಗೆಯೇ ಬಿಟ್ಟರೆ ಪೂರ್ಣ
ಹಾಳಾಗುತ್ತದೆ. ಯಂತ್ರೋಪಕರಣಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಈ ಸ್ಥಿತಿ ಬಾರದಂತೆ ನೋಡಿಕೊಂಡು ಭವಿಷ್ಯ ರೂಪಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next