ಹೊಸದಿಲ್ಲಿ: ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಹುಜನ ಸಮಾಜ ಪಕ್ಷ(BSP) ಲೋಕಸಭಾ ಸದಸ್ಯ ಡ್ಯಾನಿಶ್ ಅಲಿ ಅವರನ್ನು ಶನಿವಾರ ಪಕ್ಷದಿಂದ ಅಮಾನತುಗೊಳಿಸಿದೆ.
ಬಿಎಸ್ ಪಿ ಉತ್ತರ ಪ್ರದೇಶ ಘಟಕವು ಸಂಕ್ಷಿಪ್ತ ಹೇಳಿಕೆಯಲ್ಲಿ, ಅಮ್ರೋಹಾ ಸಂಸದ ಅಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
“ಅನೈತಿಕ ನಡವಳಿಕೆ” ಗಾಗಿ ಟಿಎಂಸಿ ಸದಸ್ಯ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ಸರಕಾರದ ನಿರ್ಣಯವನ್ನು ವಿರೋಧಿಸಿ ಅಲಿ ಶುಕ್ರವಾರ ಇತರ ವಿಪಕ್ಷದ ಸದಸ್ಯರೊಂದಿಗೆ ಲೋಕಸಭೆಯ ಕಲಾಪದಿಂದ ಹೊರನಡೆದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮಾಯಾವತಿ ನೇತೃತ್ವದ ಬಿಎಸ್‌ಪಿಯು ಆಡಳಿತಾರೂಢ ಮೈತ್ರಿಕೂಟ ಹಾಗೂ ಪ್ರತಿಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದರೂ ಬಿಜೆಪಿ ಮತ್ತು ಅದರ ನೀತಿಗಳ ವಿರುದ್ಧ ಅಲಿ ಸಕ್ರಿಯವಾಗಿ ಪ್ರತಿಪಕ್ಷಗಳೊಂದಿಗೆ ಸೇರುತ್ತಿದ್ದಾರೆ.
“ನೀವು ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತನ್ನು ಮೀರಿ ಯಾವುದೇ ಹೇಳಿಕೆ ನೀಡಬಾರದು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನಿಮಗೆ ಹಲವು ಬಾರಿ ಮೌಖಿಕವಾಗಿ ಹೇಳಲಾಗಿದೆ, ಆದರೆ ನೀವು ಪಕ್ಷದ ವಿರುದ್ಧ ನಿರಂತರವಾಗಿ ವರ್ತಿಸುತ್ತಿದ್ದೀರಿ” ಎಂದು ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅಲಿ ಅವರಿಗೆ ಪತ್ರ ಬರೆದಿದ್ದಾರೆ.
”ದೇವೇಗೌಡರ ಕೋರಿಕೆಯ ಮೇರೆಗೆ ನಿಮಗೆ ಬಿಎಸ್ ಪಿ ಅಭ್ಯರ್ಥಿಯಾಗಿ ಅಮ್ರೋಹದಿಂದ ಟಿಕೆಟ್ ನೀಡಲಾಯಿತು ಮತ್ತು ಈ ಟಿಕೆಟ್ ನೀಡುವ ಮೊದಲು, ಬಿಎಸ್ ಪಿ ಎಲ್ಲಾ ನೀತಿಗಳು ಮತ್ತು ಸೂಚನೆಗಳನ್ನು ನೀವು ಯಾವಾಗಲೂ ಅನುಸರಿಸುತ್ತೀರಿ ಎಂದು ಗೌಡರು ಭರವಸೆ ನೀಡಿದ್ದರು.ಅವರು ನೀಡಿದ ಆಶ್ವಾಸನೆಗಳನ್ನು ಮರೆತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೀರಿ.ಪಕ್ಷದ ಹಿತದೃಷ್ಟಿಯಿಂದ, ತತ್ ಕ್ಷಣವೇ ಜಾರಿಗೆ ಬರುವಂತೆ ಪಕ್ಷದ ಸದಸ್ಯತ್ವದಿಂದ ನಿಮ್ಮನ್ನು ಅಮಾನತುಗೊಳಿಸಲಾಗಿದೆ” ಎಂದು ಹಿಂದಿಯಲ್ಲಿ ಪತ್ರ ಬರೆಯಲಾಗಿದೆ.
ಮಿಶ್ರಾ ಅವರು 2018 ರವರೆಗೆ ಎಚ್‌ಡಿ ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷದ ಸದಸ್ಯರಾಗಿದ್ದರು.