Advertisement

ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್‌ ಪತನ

06:00 AM Oct 12, 2018 | Team Udayavani |

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್‌ ಪತನವಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಗುರುವಾರ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಎನ್‌.ಮಹೇಶ್‌ ಅವರು ರಾಜ್ಯಪಾಲ ವಜೂಬಾಯ್‌ ವಾಲಾ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮುರಿದುಬಿದ್ದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದಲ್ಲಿ ಮುಂದುವರಿಯುವುದು ಬೇಡ ಎಂದು ಖುದ್ದು ಮಾಯಾವತಿ ಅವರೇ ಸೂಚನೆ ನೀಡಿದ್ದರಿಂದ ಮಹೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಜತೆ ಮೈತ್ರಿ ಬೇಡ ಎಂದ ಮೇಲೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಎಂದು ಪಕ್ಷದ ರಾಜ್ಯ  ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್ ಅವರಿಗೆ ಸೂಚನೆ ನೀಡಿ ಮಹೇಶ್‌ ಅವರಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.

ವಿಕಾಸಸೌಧದಲ್ಲಿ ಬಿಎಸ್‌ಪಿ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್ ಅವರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌.ಮಹೇಶ್‌, ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದು ಬೆಂಗಳೂರಿಗೆ ಹೋದರು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ, ನನ್ನ ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಬೇಕಾಗಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

Advertisement

ಎಚ್‌ಡಿಕೆಗೆ ಬೆಂಬಲ ಅಚಲ
ನನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚಿನ ಗಮನಹರಿಸಬೇಕು. ಲೋಕಸಭೆ ಚುನಾವಣೆಗೆ ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ನನ್ನ ಬೆಂಬಲ ಇರುತ್ತದೆ. ಉಪ ಚುನಾವಣೆಯಲ್ಲೂ ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದೇನೆ ಎಂದಷ್ಟೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರದ ಪ್ರಸ್ತಾಪವನ್ನೇ ಮಾಡಲಿಲ್ಲ.

ಸಚಿವ ಸ್ಥಾನದಲ್ಲಿ ಉತ್ತಮವಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲಾಯಿತಾ ಎಂಬ ಪ್ರಶ್ನೆಗೆ, ಆ ರೀತಿ ಇಲ್ಲ. ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಹೊಣೆಗಾರಿಕೆ ಕೊಟ್ಟಿದ್ದರು. ನಾಲ್ಕೂವರೆ ತಿಂಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಅ.4 ರಂದು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದ ಎನ್‌.ಮಹೇಶ್‌, ಕಾಂಗ್ರೆಸ್‌ ಇಷ್ಟು ವರ್ಷ ಅಧಿಕಾರ ನಡೆಸಿದರೂ  ಶೋಷಿತ ವರ್ಗಗಳ ಪರ ಕೆಲಸ ಮಾಡಲಿಲ್ಲ ಎಂದು  ಆರೋಪಿಸಿದ್ದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ ಎಂದು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾತಿ ಹೇಳಿದ ಮರುದಿನವೇ, ಮಹೇಶ್‌ ಸಹ ಕಾಂಗ್ರೆಸ್‌ ವಿರುದ್ಧ ವಾಗಾœಳಿ ನಡೆಸಿದ್ದರು. ನಮ್ಮ ಮೈತ್ರಿ ಜೆಡಿಎಸ್‌ ಜತೆಗೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದೂ ತಿಳಿಸಿದ್ದರು.

ವಾರದ ಹಿಂದೆಯೇ ಪ್ರಸ್ತಾಪ
ಮಾಯಾವತಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗಾœಳಿ ಮಾಡುವಾಗ ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ ಎಂದು ಹೇಳುವಾಗ ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಸಚಿವರು ಇರುವುದು ಎಷ್ಟು ಸರಿ ಎಂದು ಖುದ್ದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಬಳಿ ಪ್ರಸ್ತಾಪಿಸಿದ್ದರು. 

ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಬಿಎಸ್‌ಪಿ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಜತೆ ಇರುವುದಿಲ್ಲ ಎಂದಾದರೆ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಸಚಿವರು ಇರುವ ಔಚಿತ್ಯ ಇಲ್ಲ ಎಂದು ಪರೋಕ್ಷವಾಗಿ ಸಚಿವ ಸ್ಥಾನದಿಂದ ತೆಗೆದು ಹಾಕಬೇಕಾಗುತ್ತದೆ ಎಂದು ಹೇಳಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ  ವಾರದ ನಂತರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಸಚಿವ ಸ್ಥಾನ ತೊರೆಯುವಂತೆ ಮಹೇಶ್‌ಗೆ ಸೂಚಿಸಲಾಯಿತು ಎಂದು ತಿಳಿದು ಬಂದಿದೆ

ಅನುದಾನ ವಿಚಾರದಲ್ಲಿ ಬೇಸರ
ಕೊಳ್ಳೇಗಾಲ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಸಂಬಂಧ ಮಹೇಶ್‌ ಬೇಸರಗೊಂಡಿದ್ದರು. ಮುಖ್ಯಮಂತ್ರಿ ಬಳಿಯೂ ಹಲವಾರು ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಆದರೂ ಬಿಡುಗಡೆ ಆಗಿರಲಿಲ್ಲ. ಈ ಬಗ್ಗೆ ಹಲವು ಸಚಿವರ ಬಳಿಯೂ ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೂ ಸಹ ಅವರ ರಾಜೀನಾಮೆಗೆ ಕಾರಣ ಇರಬಹುದು ಎಂದು ಹೇಳಲಾಗಿದೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ನನಗೇನೂ ಅಸಮಾಧಾನ ಇಲ್ಲ ಎಂದು ಮಹೇಶ್‌ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ತಾನಾಗೇ ಬೀಳುತ್ತದೆ ಎಂದು ನಾವು ಹೇಳಿದ್ದೆವು. ಅದು  ಈಗ ಸತ್ಯವಾಗಿದೆ. ನಾವು ಜ್ಯೋತಿಷಿಗಳಲ್ಲ. ಆದರೆ, ನಮ್ಮ ರಾಜಕೀಯದ ಅನುಭವದಲ್ಲಿ ಹೇಳಿದ್ದೆವು. ಸುಮ್ಮನೆ ಕಾಂಗ್ರೆಸ್‌-ಜೆಡಿಎಸ್‌ ನವರು ಆಪರೇಷನ್‌ ಕಮಲ ಎಂದು ಹಬ್ಬಿಸುತ್ತಿದ್ದರು.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಎನ್‌.ಮಹೇಶ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಬಿಎಸ್‌ಪಿ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಕೆಲವು ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಸೂಕ್ತ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
–  ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಎನ್‌.ಮಹೇಶ್‌ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನೆಡೆಯಲ್ಲ. ಅವರ ರಾಜೀನಾಮೆ ಪಡೆಯಲು ನನ್ನನ್ನು ಮಾಯಾವತಿ ಕಳುಹಿಸಿದ್ದಾರೆ ಎಂಬುದು ಸುಳ್ಳು. ನಾನು ತಿಂಗಳಿಗೊಮ್ಮೆ ರಾಜ್ಯಕ್ಕೆ ಬರುತ್ತೇನೆ. ನಾನು ರಾಜ್ಯದ ಉಸ್ತುವಾರಿ. ಇಡೀ ದೇಶದಲ್ಲಿ ಮಾಯಾವತಿಗೆ ಅಧಿಕಾರ ನೀಡಬೇಕು ಎನ್ನುವುದು ಜನರ ಅಭಿಪ್ರಾಯ.
– ಅಶೋಕ್‌ ಸಿದ್ಧಾರ್ಥ್, ಬಿಎಸ್‌ಪಿ ರಾಜ್ಯ  ಉಸ್ತುವಾರಿ

ವಿಕಾಸಸೌಧದಲ್ಲಿ ಚರ್ಚೆ
ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಂತರ ಎನ್‌.ಮಹೇಶ್‌ ಅವರು ಬಿಎಸ್‌ಪಿ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್ ಜತೆ ವಿಕಾಸಸೌಧದಲ್ಲಿ ಕೆಲ ಹೊತ್ತು ಸಮಾಲೋಚನೆ ನಡೆಸಿದರು. ಅಲ್ಲಿಂದಲೇ ಮಾಯಾವತಿ ಅವರನ್ನೂ ದೂರವಾಣಿ ಮೂಲಕ ಸಂಪರ್ಕಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹೇಶ್‌ ಚಾಮರಾಜನಗರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
(ಎನ್‌.ಮಹೇಶ್‌ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಬಗ್ಗೆ ಅ.5 ರಂದೇ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು)

Advertisement

Udayavani is now on Telegram. Click here to join our channel and stay updated with the latest news.

Next