Advertisement

ಬಿಎಸ್‌ಪಿ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಸಂಘಟನೆ ಮಾಡಿ

10:18 PM Apr 29, 2019 | Team Udayavani |

ಹನೂರು: ಮುಂಬರುವ 2024ರ ಲೋಕಸಭಾ ಚುನಾವಣೆಗೂ ಡಾ.ಶಿವಕುಮಾರ್‌ ಅವರೇ ಬಿಎಸ್‌ಪಿ ಪಕ್ಷದ ಅಭ್ಯರ್ಥಿ ಆದ್ದರಿಂದ ಬಿಎಸ್‌ಪಿ ಕಾರ್ಯಕರ್ತರು ಪ್ರತಿ ಬೂತ್‌ ಮಟ್ಟದಲ್ಲಿಯೂ ಸಮಿತಿ ರಚನೆ ಮಾಡಿಕೊಂಡು ತಳಮಟ್ಟದಿಂದ ಸಂಘಟನೆ ಮಾಡಬೇಕು ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನದ ಆವರಣದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪರವಾಗಿ ಕಾರ್ಯನಿರ್ವಹಿಸಿದ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮತ್ತು ಚುನಾವಣೆ ಬಗ್ಗೆ ಅಭಿಪ್ರಾಯ ಪಡೆದು ಲೋಪದೋಷಗಳನ್ನು ತಿದ್ದಿಕೊಂಡು ಸಂಘಟಿಸುವ ದೃಷ್ಟಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಆದುದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಬಿಎಸ್‌ಪಿಯ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಟ್ಟು ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿದ್ದೇ ಆದಲ್ಲಿ 2024ರ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದಾಗಿದೆ ಎಂದರು.

ಕ್ಷೇತ್ರದಲ್ಲಿ ಉತ್ತಮ ವಾತಾವರಣ: ಕೊಳ್ಳೇಗಾಲ ಕ್ಷೇತ್ರವನ್ನು ಹೊರತುಪಡಿಸಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಉತ್ತಮ ವಾತಾವರಣವಿರುವ ಕ್ಷೇತ್ರ ಹನೂರು ಕ್ಷೇತ್ರವಾಗಿದೆ. ಇಲ್ಲಿನ ಯುವಕರು ಮತ್ತು ಮಹಿಳೆಯರು ಬದಲಾವಣೆ ಬಯಸುತ್ತಿದ್ದು ಇದು ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಬೀತಾಗಿದೆ.

Advertisement

ಈ ಕ್ಷೇತ್ರದ ಜನರು ಬಹಳ ಮುಗ್ಧರಾಗಿದ್ದು ಎರಡು ಪಕ್ಷಗಳಿಂದ ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜುನಾಥ್‌ 15 ದಿನಗಳ ಅವಧಿಯಲ್ಲಿ 45 ಸಾವಿರ ಮತ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

10 ಸಾವಿರ ಮತ ಪಡೆದರೆ 3 ಜನರಿಗೆ ನಡುಕ: ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಎಸ್‌ಪಿ 13 ಸಾವಿರದಿಂದ 15 ಸಾವಿರ ಮತ ಪಡೆಯುವ ವಿಶ್ವಾಸವನ್ನು ಕಾರ್ಯಕರ್ತರು ಹೊಂದಿದ್ದಾರೆ. ಒಂದೊಮ್ಮೆ 10 ಸಾವಿರ ಮತ ಪಡೆದಿದ್ದೇ ಆದಲ್ಲಿ ಈ ಕ್ಷೇತ್ರದಲ್ಲಿ ಮೂರು ಜನರಿಗೆ ನಡುಕ ಹುಟ್ಟಿಕೊಳ್ಳಲಿದೆ ಎಂದು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪಿಸದೆ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣಾ ಅಭ್ಯರ್ಥಿ ಡಾ.ಶಿವಕುಮಾರ್‌ ಮಾತನಾಡಿ, ಈ ಬಾರಿ ನರೇಂದ್ರ ಮೋದಿ ಅಥವಾ ರಾಹುಲ್‌ ಗಾಂಧಿ ಯಾರೇ ಪ್ರಧಾನಿಯಾದರೂ ದೇಶ ಮಾರುತ್ತಾರೆ. ಕಳೆದ 25 ವರ್ಷದಿಂದ ಸರ್ಕಾರಿ ಸ್ವಾಮ್ಯದ ಹಲವಾರು ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನಾಮಕಾವಸ್ಥೆಗೆ ಮಾತ್ರ ಸರ್ಕಾರವಿದ್ದು ಎಲ್ಲಾ ಪ್ರಮುಖ ನಿರ್ಧಾರಗಳನ್ನು ಖಾಸಗಿಯವರೇ ನಿರ್ಧರಿಸುತ್ತಿದ್ದಾರೆ. ದೇಶವನ್ನು ಉಳಿಸುವುದು ಕೇವಲ ಬಿಎಸ್‌ಪಿಯವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾದೇಶ್‌ ಉಪ್ಪಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಉಸ್ತುವಾರು ಕೆಂಪನಪಾಳ್ಯ ಸಿದ್ದರಾಜು, ಹನೂರು ತಾಲೂಕು ಬಿಎಸ್‌ಪಿ ಅಧ್ಯಕ್ಷ ನಂಜುಂಡಸ್ವಾಮಿ, ಚಿಂಚಳ್ಳಿ ಬಸವರಾಜು, ಮರಿಸ್ವಾಮಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next