ಸಾಗರ: ತಾಲೂಕಿನ ಹಕ್ರೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಛಾವಣಿ ಮೇಲೆ ಬಿಎಸ್ ಎನ್‌ಎಲ್ ಟವರ್ ತೆರವು ಕಾರ್ಯಕ್ಕೆ ಬಿಎಸ್‌ಎನ್ ಎಲ್ ವಿಳಂಬ ಮಾಡುತ್ತಿದ್ದು, ಶೀಘ್ರ ತೆರವು ಕಾರ್ಯ ಮಾಡಬೇಕಿದೆ. ಈ ನಡುವೆ ತೆರವು ವಿಳಂಬವಾಗುವುದರಿಂದ ಶಾಲೆಯೊಳಗಿನ ಹಳೆಯ ದಾಖಲೆಗಳು ಬೀಳುತ್ತಿರುವ ಹಳೆಯ ಮಳೆಗೆ ನಾಶವಾಗುವ ಅಪಾಯ ಎದುರಾಗಿದೆ.
ಟವರ್ ಬಿದ್ದು ಮೂರು ದಿನ ಕಳೆದರೂ ತೆರವು ಕಾರ್ಯಕ್ಕೆ ನಿರ್ಲಕ್ಷ್ಯ ವಹಿಸುವ ಜತೆಗೆ ಈ ಭಾಗದಲ್ಲಿನ ದೂರವಾಣಿ ಸಂಪರ್ಕ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ತರಗತಿ ನಡೆಸುವ ಸಮಸ್ಯೆ ಇಲ್ಲ. ಆದರೆ ಟವರ್ ಬಿದ್ದ ಹಿನ್ನೆಲೆಯಲ್ಲಿ ಹೆಂಚುಗಳು ಒಡೆದಿದ್ದು, ಮಳೆ ನೀರಿನಿಂದಾಗಿ ಕೋಣೆಯೊಳಗಿನ ವಸ್ತುಗಳು, ಪೀಠೊಪಕರಣ, ಸಲಕರಣೆಗಳು ಹಾಳಾಗುವ ಸಾಧ್ಯತೆಗಳಿವೆ. ಟವರ್ ತೆರವುಗೊಳಿಸದೆ ಶಾಲೆಗೆ ಸಂಬಂಧಪಟ್ಟವರು ಒಳಪ್ರವೇಶ ಮಾಡಲು ಸಾಧ್ಯವಿಲ್ಲ. ಪೂರ್ವ ಪ್ರಾಥಮಿಕದಲ್ಲಿ 11 ಹಾಗೂ ಒಂದರಿಂದ 5ನೆಯ ತರಗತಿ ವರೆಗೆ 11 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಓರ್ವ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಟವರ್ ಬಿದ್ದ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ತೆರವು ಕಾರ್ಯಕ್ಕೆ ಕೋರಲಾಗಿದೆ. ತಾಪಂ ಅಧಿಕಾರಿಗಳಿಗೆ, ಗ್ರಾಪಂ ಉಪಾಧ್ಯಕ್ಷರಿಗೆ, ಪಿಡಿಒಗೆ ಸಹ ಶಿಕ್ಷಕರು ಮಾಹಿತಿ ನೀಡಿದ್ದಾರೆ. ವಾಲಿರುವ ಟವರ್ ಇನ್ನೂ ಶಾಲೆಯ ಛಾವಣಿಗೆ ಆತುಕೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಸಹ ಇದೆ. ಶೀಘ್ರ ತೆರವು ಕಾರ್ಯಕ್ಕೆ ಬಿಎಸ್‌ಎನ್‌ಎಲ್ ಮನಸ್ಸು ಮಾಡಬೇಕಾಗಿದೆ.
ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಹಕ್ರೆ, ವರದಹಳ್ಳಿ, ಕರ್ಕಿಕೊಪ್ಪ ಮತ್ತಿತರ ಆಸುಪಾಸಿನ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬಿಎಸ್‌ಎನ್‌ಎಲ್ ಅಧಿಕಾರಿಗಳು ಶೀಘ್ರ ದುರಸ್ತಿ ಕಾರ್ಯ ನಿರ್ವಹಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಲೆಯ ಮೇಲೆ ಟವರ್ ಬಿದ್ದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮೇ 9ರಂದು ತೆರವು ಕಾರ್ಯ ನಡೆಸುವ ಸಾಧ್ಯತೆ ಇದೆ. ಟವರ್ ತೆರವು ಹಾಗೂ ಹೆಂಚು ಹಾಕಿಸುವ ಸಂಬಂಧ ಸದ್ಯ ಕೆಲಸ ಮಾಡಲಾಗುವುದು. ಸಂಪರ್ಕ ವ್ಯವಸ್ಥೆ ಸರಿಪಡಿಸಲು ಹೊಸ ಟವರ್ ಸ್ಥಾಪಿಸಬೇಕಾಗಿದೆ ಎಂದು ಬಿಎಸ್‌ಎನ್‌ಎಲ್‌ನ ಸ್ಥಳೀಯ ನಿರ್ವಾಹಕ ಅರುಣ್ ತಿಳಿಸುತ್ತಾರೆ. ಆದರೆ ಟವರ್ ತೆಗೆಯಲು ಇನ್ನೂ ಒಂದು ವಾರ ಬೇಕಾಗಿದ್ದು ಬಿಎಸ್‌ಎನ್‌ಎಲ್‌ನಲ್ಲಿ ಬಜೆಟ್ ಕಾರಣದಿಂದ ವಿಳಂಬವಾಗಲಿದೆ. ಹೊಸ ಟವರ್ ನಿರ್ಮಾಣ ಕೂಡ ತಡವಾಗಲಿದೆ ಎಂದು ಬಿಎಸ್ ಎನ್‌ಎಲ್ ಮೂಲಗಳು ತಿಳಿಸಿವೆ.
ಟವರ್ ಶಾಲೆಯ ಛಾವಣೆಯ ಮೇಲೆ ಬಿದ್ದ ಮಾಹಿತಿಯನ್ನು ಶಿಕ್ಷಣಾಧಿಕಾರಿ ಕಚೇರಿ ಮೂಲಕ ಬಿಎಸ್‌ಎನ್‌ಎಲ್‌ಗೆ ನೀಡಲಾಗಿದೆ. ಟವರ್ ತೆಗೆಯದೇ ಶಾಲಾ ಕಟ್ಟಡ ಒಳಗೆ ಹೋಗಲು ಸಾಧ್ಯವಿಲ್ಲ. ಸ್ಥಳೀಯ ಗ್ರಾಪಂಗೆ ಸಹ ಮಾಹಿತಿ ನೀಡಲಾಗಿದೆ. ಶೀಘ್ರವಾಗಿ ಟವರ್ ತೆರವು ಮಾಡಿಕೊಡಬೇಕಾಗಿದೆ
. -ಶಿಕ್ಷಕರು, ಸರಕಾರಿ ಪ್ರಾಥಮಿಕ ಶಾಲೆ ಹಕ್ರೆ