ದಾವಣಗೆರೆ: ಕೇಂದ್ರದ ಬಂಡವಾಳ ಹಿಂತೆಗೆತ, ಪ್ರತ್ಯೇಕ ಟವರ್ ಕಂಪನಿ ಪ್ರಾರಂಭ ಒಳಗೊಂಡಂತೆ ಅನೇಕ ಪ್ರಸ್ತಾವನೆ ವಿರೋಧಿಸಿ ಗುರುವಾರ ಬಿಎಸ್‌ಎನ್‌ಎಲ್ ಎಲ್ಲಾ ಯೂನಿಯನ್ ಮತ್ತು ಅಸೋಸಿಯೇಷನ್ ಒಕ್ಕೂಟದ ನೇತೃತ್ವದಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಅಧಿಕಾರೇತರ ನೌಕರರು ಪ್ರತಿಭಟನಾ ರ್ಯಾಲಿ ನಡೆಸಿದರು.
ಆರ್.ಎಚ್. ಛತ್ರ ಮುಂದಿರುವ ಬಿಎಸ್ ಎನ್‌ಎಲ್ ಮ್ಯಾಕ್ಸ್-1 ದೂರವಾಣಿ ಕೇಂದ್ರದಿಂದ ಪ್ರತಿಭಟನಾ ರ್ಯಾಲಿ ಪ್ರಾರಂಭಿಸಿದ ಅಧಿಕಾರಿಗಳು, ಅಧಿಕಾರೇತರ ನೌಕರರು ಮಹಾತ್ಮಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತದ ಮೂಲಕ ಬಿಎಸ್ ಎನ್‌ಎಲ್ ಮ್ಯಾಕ್ಸ್-1 ದೂರವಾಣಿ ಕೇಂದ್ರಕ್ಕೆ ತಲುಪಿ ಮನವಿ ಸಲ್ಲಿಸಿದರು.
2017 ಫೆ. 20 ರಂದು ಪ್ರಧಾನಮಂತ್ರಿಗಳ ಕಚೇರಿಯಿಂದ ಬಂದಿರುವ ಪತ್ರದ ಆಧಾರದಲ್ಲಿ ಕೇಂದ್ರ ಸರ್ಕಾರ ಬಿಎಸ್ ಎನ್‌ಎಲ್‌ನಿಂದ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿರುವುದು ಕೋಟ್ಯಾಂತರ ಜನರ ಜೀವನಕ್ಕೆ ಮಾರಕವಾದ ನಿರ್ಧಾರ. ಒಂದೊಮ್ಮೆ ಕೇಂದ್ರ ತನ್ನ ಪಾಲಿನ ಬಂಡವಾಳ ಹಿಂದಕ್ಕೆ ಪಡೆದಲ್ಲಿ ಬಿಎಸ್ ಎನ್‌ಎಲ್ ಅಸ್ತಿತ್ವವೇ ಉಳಿಯುವುದಿಲ್ಲ.
ಹಾಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತನ್ನ ಪಾಲಿನ ಬಂಡವಾಳ ಹಿಂದಕ್ಕೆ ಪಡೆಯದೆ, ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತ್ಯೇಕ ಟವರ್ ಕಂಪನಿ ಪ್ರಾರಂಭಕ್ಕೆ ಮುಂದಾಗುವ ಮೂಲಕ ಬಿಎಸ್‌ಎನ್‌ಎಲ್‌ಗೆ ಮತ್ತೂಂದು ಆಘಾತ ನೀಡುವುದು ಸರಿಯಲ್ಲ.
ಬಿಎಸ್‌ಎನ್‌ಎಲ್‌ನ ಆದಾಯ ಮೊಬೈಲ್ ಸೇವೆಯೇ ಮೇಲೆ ನಿಂತಿದೆ. ಅದಕ್ಕಾಗಿಯೇ ಪ್ರತ್ಯೇಕ ಟವರ್ ಕಂಪನಿ ಪ್ರಾರಂಭಿಸಿದ್ದಲ್ಲಿ ಆದಾಯ ಖೋತಾ ಆಗಲಿದೆ. ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ದೊರೆಯಬೇಕಾದ ವೇತನ, ಸೌಲಭ್ಯಕ್ಕೆ ಇನ್ನಿಲ್ಲದ ಸಮಸ್ಯೆ ಎದುರಾಗಲಿದೆ.
ಹಾಗಾಗಿ ಪ್ರತ್ಯೇಕ ಟವರ್ ಕಂಪನಿ ಪ್ರಾರಂಭ ಪ್ರಸ್ತಾವ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಖಾಸಗಿ ಕಂಪನಿಯ ಮೊಬೈಲ್ ಸೇವೆಗೆ ಅಗತ್ಯಕ್ಕಿಂಯಲೂ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಅನಾವಶ್ಯಕವಾಗಿ ಸೇವಾ ಸೌಲಭ್ಯ ಒದಗಿಸುವ ಮೂಲಕ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಮಾರಕವಾಗುತ್ತಿದೆ.
4 ಜಿ ಸೆಕ್ಟ್ರಂನ್ನು ಬಿಎಸ್ ಎನ್‌ಎಲ್‌ಗೆ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು.ಬಿಎಸ್‌ಎನ್‌ಎಲ್ ಎಲ್ಲಾ ಯೂನಿಯನ್ ಮತ್ತು ಅಸೋಸಿಯೇಷನ್ ಒಕ್ಕೂಟದ ಈರಣ್ಣ, ವಿಕ್ಟರ್, ಗೋಪಾಲನಾಯ್ಕ, ಜಯಪ್ಪನಾಯ್ಕ, ಚನ್ನಪ್ಪ, ಸುರೇಶ್, ನಟರಾಜ್, ಗೋವಿಂದರಾಜ್, ವಸಂತ್ ಇತರರು ಇದ್ದರು.