Advertisement
ಹೌದು, ಸುಮಾರು 30 ವರ್ಷಗಳ ಸೇವಾವಧಿಯಲ್ಲಿ ಯೋಧರು ತಮ್ಮ ಕುಟುಂಬದ ಜತೆಗೆ ಕಳೆಯುವುದು ಕೇವಲ 5 ವರ್ಷ ಮಾತ್ರ. ದೇಶದ ಜನ ನೆಮ್ಮದಿಯಿಂದ ನಿದ್ರಿಸಲೆಂದು ಬಯಸುವ, ನಮಗಾಗಿ ಪ್ರಾಣವನ್ನೇ ಪಣ ಕ್ಕಿಡುವ ಯೋಧರಿಗೂ ಅವರದ್ದೇ ಆದ ಆಸೆಗಳಿರುತ್ತವೆ. ಆದರೆ ದೇಶರಕ್ಷಣೆಯ ಕೆಲಸದಲ್ಲಿ ತೊಡಗಿರುವ ಅವರಿಗೆ ಅದನ್ನು ಪೂರ್ಣಗೊಳಿಸಲು ಆಗುವುದೇ ಇಲ್ಲ. ಹೀಗಾಗಿ ಏಕಾಂಗಿತನ, ಮಾನಸಿಕ ಒತ್ತಡ, ಕಿರಿಕಿರಿ ಅವರ ಜತೆಯಾಗುತ್ತದೆ. ಯೋಧರನ್ನು ಇಂಥ ಋಣಾತ್ಮಕ ಬದುಕಿನಿಂದ ಹೊರತರುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹತ್ವದ ಹೆಜ್ಜೆಯಿಟ್ಟಿದೆ. ಅದೇನೆಂದರೆ ದೇಶಾದ್ಯಂತ 190 ಕಡೆ ಅತಿಥಿಗೃಹಗಳನ್ನು ನಿರ್ಮಿಸಿ, ಅಲ್ಲಿ ನವವಿವಾಹಿತ ಯೋಧರಿಗೆ ತಮ್ಮ ಪತ್ನಿಯರೊಂದಿಗೆ ಕಳೆಯುವ, ರಜಾಕಾಲದಲ್ಲಿ ಪತ್ನಿ, ಮಕ್ಕಳೊಂದಿಗೆ ಖುಷಿಯಾಗಿರುವ ಅವಕಾಶ ವನ್ನು ನೀಡುವುದು.
ಪ್ರತಿ ಬೆಟಾಲಿಯನ್‌ನಲ್ಲಿ ಸ್ಟುಡಿಯೋ ಅಪಾರ್ಟ್‌ಮೆಂಟ್ ಮಾದರಿ 15 ಅತಿಥಿ ಗೃಹಗಳು ಇರಲಿವೆ. ಪ್ರತಿ ಅತಿಥಿಗೃಹದಲ್ಲಿ ಒಂದು ಬೆಡ್‌ರೂಂ, ಅಡುಗೆ ಮನೆ, ಸ್ನಾನದ ಕೊಠಡಿ ಮತ್ತು ಮನೋರಂಜನೆಗಾಗಿ ಟಿವಿ ವ್ಯವಸ್ಥೆ ಇರಲಿದೆ. ಜತೆಗೆ ಅಡುಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳು ಇದರಲ್ಲಿರಲಿವೆ.