ಮುಂಬಯಿ : ಸಾಗರೋತ್ತರ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ಗಟ್ಟಿಯಾಗುತ್ತಿರುವ ನಡುವೆಯೇ ಇಂದು ಹೂಡಿಕೆದಾರರು ಮತ್ತು ವಹಿವಾಟುದಾರರು ಬ್ಯಾಂಕಿಂಗ್, ಎನರ್ಜಿ, ಐಟಿ ಶೇರುಗಳ ಭರಾಟೆಯ ಖರೀದಿ ನಡೆಸಿದ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು ಎರಡು ವಾರಗಳ ಗರಿಷ್ಠ ಮಟ್ಟವಾಗಿ 416 ಅಂಕಗಳ ಭರ್ಜರಿ ಜಿಗಿತದೊಂದಿಗೆ 35,322.38 ಅಂಕಗಳ ಮಟ್ಟಕ್ಕೇರಿತು.
ಮೇ ತಿಂಗಳ ವಾಯಿದೆ ವಹಿವಾಟು ಚುಕ್ತಾ ಆಗುವ ತಿಂಗಳ ಕೊನೆಯ ಗುರುವಾರವಾದ ಇಂದು ವಹಿವಾಟುದಾರರಿಂದ ವ್ಯಾಪಕ ಶಾರ್ಟ್ ಕವರಿಂಗ್ ನಡೆದಿರುವುದು ಕೂಡ ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವಾಯಿತು. ಈಗಿನ್ನು ಜಿಡಿಪಿ ಅಂಕಿ ಅಂಶಗಳು ಪ್ರಕಟವಾಗಲಿದ್ದು ಶೇರು ಮಾರುಕಟ್ಟೆ ಅದನ್ನು ಕುತೂಹಲದಿಂದ ಎದುರು ನೋಡುತ್ತಿದೆ.
ಈ ವರ್ಷ ಎಪ್ರಿಲ್ 5ರಂದು ಸೆನ್ಸೆಕ್ಸ್ 577.73 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು. ಅನಂತರದಲ್ಲಿ ಇಂದಿನ 416 ಅಂಕಗಳ ಮುನ್ನಡೆಯೇ ದೊಡ್ಡ ಪ್ರಮಾಣದ್ದಾಗಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 259.37 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 121.80 ಅಂಕಗಳ ಜಿಗಿತವನ್ನು ಸಾಧಿಸಿ 10,736.15 ಅಂಕಗಳ ಮಟ್ಟವನ್ನು ತಲುಪುವ ಮೂಲಕ ದಿನದ ವಹಿವಾಟನ್ನು ಭರ್ಜರಿಯಾಗಿ ಕೊನೆಗೊಳಿಸಿತು.
ನಿನ್ನೆ ಬುಧವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 492.46 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು. ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರ ಸಂಸ್ಥೆಗಳು 1,286.91 ಕೋಟಿ ರೂ. ಶೇರುಗಳನ್ನು ಮಾರಿದ್ದವು.