ಮುಂಬಯಿ : ಇಂದು ಶುಕ್ರವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸಂಪಾದಿಸಿದ ಮುನ್ನಡೆಯನ್ನು ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣವಾಗಿ ಬಿಟ್ಟುಕೊಟ್ಟ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 287 ಅಂಕಗಳ ನಷ್ಟದೊಂದಿಗೆ 34,010.76 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 93.20 ಅಂಕಗಳ ನಷ್ಟದೊಂದಿಗೆ 10,452.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಹೂಡಿಕೆದಾರರು ಮತ್ತು ವಹಿವಾಟುದಾರರು ಇಂದು ಮಧ್ಯಾಹ್ನ ಲಾಭನಗದೀಕರಣಕ್ಕೆ ಒತ್ತು ಕೊಟ್ಟ ಕಾರಣ ಬಹುತೇಕ ಎಲ್ಲ ರಂಗದ ಶೇರುಗಳು ಒತ್ತಡಕ್ಕೆ ಗುರಿಯಾದವು. ಹಗರಣ ಕಳಂಕಿತ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶೇರುಗಳು ಇಂದು ನಿರಂತರ ಮೂರನೇ ದಿನವೂ ಕುಸಿದವು.
ವಿದೇಶಿ ಹೂಡಿಕೆದಾರರು 240.29 ಕೋಟಿ ರೂ. ಮೌಲ್ಯದ ಶೇರಗಳನ್ನು ಮಾರಾಟ ಮಾಡಿದರು. ಆದರೆ ದೇಶೀಯ ಹೂಡಿಕೆ ಸಂಸ್ಥೆಗಳು 49.92 ಕೋಟಿ ರೂ ಮೌಲ್ಯದ ಶೇರುಗಳನ್ನು ಖರೀದಿಸಿದರು.
ಜನವರಿಯಲ್ಲಿ ದೇಶದ ಆಮದು ರಫ್ತು ನಡುವಿನ ಅಂತರ 16.3 ಬಿಲಿಯ ಡಾಲರ್‌ಗೆ ಏರಿರುವುದು ಶೇರು ಮಾರುಕಟ್ಟೆಯ ಕಳವಳಕ್ಕೆ ಕಾರಣವಾಗಿತ್ತು.