ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ವಹಿವಾಟುದಾರರು ಮತ್ತು ಹೂಡಿಕೆದಾರರಿಂದ ಲಾಭ ನಗದೀಕರಣದ ಶೇರು ಮಾರಾಟ ಜೋರಾಗಿ ನಡೆದ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಟನ್ನು 159 ಅಂಕಗಳ ನಷ್ಟದೊಂದಿಗೆ 35,264.41 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57 ಅಂಕಗಳ ನಷ್ಟದೊಂದಿಗೆ 10,657.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. ಸೆನ್ಸೆಕ್ಸ್ ಕಳೆದ ಶುಕ್ರವಾರ 385.84 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತ್ತು.
ಇಂದು ಮೂಲ ಸೌಕರ್ಯ ಕ್ಷೇತ್ರದ ಶೇರುಗಳು ಕುಸಿತವನ್ನು ಕಂಡರೆ ವ್ಯತಿರಿಕ್ತವಾಗಿ ಐಟಿ, ಕನ್ಸೂಮರ್ ಡ್ಯುರೇಬಲ್, ಟೆಕ್ ಶೇರುಗಳು ಮುನ್ನಡೆ ಕಂಡವು.
ಕಳೆದ ಶುಕ್ರವಾರ ವಿದೇಶಿ ಹೂಡಿಕೆದಾರ ಸಂಸ್ಥೆಗಳು 157.15 ಕೋಟಿ ರೂ. ಶೇರುಗಳನ್ನು ಮಾರಿದ್ದವು; ದೇಶೀಯ ಹೂಡಿಕೆದಾರ ಸಂಸ್ಥೆಗಳು 2,262.83 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,765 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 941 ಶೇರುಗಳು ಮುನ್ನಡೆ ಕಂಡವು; 1,658 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.