ಮುಂಬಯಿ : ಇದೇ ಜು.1ರಿಂದ ಜಾರಿಗೆ ಬರಲಿರುವ ಜಿಎಸ್‌ಟಿ ಬಗ್ಗೆ ಭಯ, ಆತಂಕ, ಕಾತರ ಹೊಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 179.96 ಅಂಕಗಳ ನಷ್ಟದೊಂದಿಗೆ 30,958.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕಳೆದ ಮೇ 25ರ ಬಳಿಕ ಸೆನ್ಸೆಕ್ಸ್ 31,000 ಕ್ಕಿಂತ ಕೆಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸುತ್ತಿರುವುದು ಇದೇ ಮೊದಲಾಗಿದೆ.
ಸೆನ್ಸೆಕ್ಸ್ ರೀತಿಯಲ್ಲೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 63.55 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,511.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳಲ್ಲಿ ಮುನ್ನಡೆ ಸಾಧಿಸಿದ ಶೇರುಗಳ ಸಂಖ್ಯೆ ಕೇವಲ 725. ಹಿನ್ನಡೆಗೆ ಗುರಿಯಾದ ಶೇರುಗಳು 1,896. ಯಾವುದೇ ಬದಲಾವಣೆ ಕಾಣದ ಶೇರುಗಳು 161.
ಧಾರಣೆಯಲ್ಲಿ ಇಳಿಕೆ ಕಂಡ ಶೇರುಗಳೆಂದರೆ ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಝೀ ಎಂಟರ್‌ಟೇನ್‌ಮೆಂಟ್. ಏರಿಕೆ ಕಂಡ ಶೇರುಗಳೆಂದರೆ ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಐಓಸಿ ಮತ್ತು ಗೇಲ್.
ಇನ್ನು ಎರಡು ಮೂರು ದಿನಗಳ ಒಳಗೆ ಮುಂಗಾರು ಮಳೆ ಇಡಿಯ ದೇಶವನ್ನು ವ್ಯಾಪಿಸಲಿದೆ ಎಂಬ ಹವಾಮಾನ ಇಲಾಖೆಯ ಭವಿಷ್ಯವಾಣಿ ಶೇರು ಮಾರುಕಟ್ಟೆಗೆ ಮಧ್ಯಾಹ್ನದ ವೇಳೆಗೆ ಹಿತಕಾರಿ ಎನಿಸಿತು.