ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಬೆಳಗ್ಗಿನ ವಹಿವಾಟಿನಲ್ಲಿ ನಿರಂತರ ಮೂರನೇ ದಿನದ ಏರಿಕೆಯಾಗಿ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಆರ್‌ಬಿಐಗೆ ಹೊಸ ಗವರ್ನರ್ ನೇಮಕಗೊಂಡಿರುವುದು, ಡಾಲರ್ ಎದುರು ರೂಪಾಯಿ ಚೇತರಿಸಿಕೊಂಡಿರುವುದು ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿ ಧನಾತ್ಮಕ ಸನ್ನಿವೇಶ ಕಂಡು ಬಂದಿರುವುದೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆ ಇಂದು ತನ್ನ ಏರುಗತಿಯನ್ನು ಕಾಯ್ದುಕೊಂಡಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 549.20 ಅಂಕಗಳ ಭರ್ಜರಿ ಏರಿಕೆಯೊಂದಿಗೆ 33,98.51 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 163.10 ಅಂಕಗಳ ಏರಿಕೆಯೊಂದಿಗೆ 10,193.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 42 ಪೈಸೆಗಳ ಏರಿಕೆಯನ್ನು ಕಂಡು 71.59 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.