ಮುಂಬಯಿ : ಎರಡು ದಿನಗಳ ನಿರಂತರ ನಷ್ಟದ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆ ಇಂದು ಗುರುವಾರ ಲಾಭದ ಹಾದಿಗೆ ತಿರುಗಿದೆ. ಇಂದು ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 245 ಅಂಕಗಳ ಭರ್ಜರಿ ಜಿಗಿತವನ್ನು ಸಾಧಿಸಿದೆ.
ಇಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಇನ್ನಷ್ಟು ದಿನೋಪಯೋಗಿ ವಸ್ತುಗಳು ಅಗ್ಗವಾಗಬಹುದು ಎಂಬ ಆಶಾವಾದದಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಆಯ್ದ ಶೇರುಗಳು ಖರೀದಿಯಲ್ಲಿ ತೊಡಗಿಕೊಂಡದ್ದೇ ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವಾಯಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 97.75 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,316.56 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ 35.40 ಅಂಕಗಳ ಮುನ್ನಡೆಯನ್ನು ಕಾಯ್ದಕೊಂಡು 10,338.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ 512.8 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದು ಕಂಡು ಬಂದ ಹೊಸ ಉತ್ಸಾಹದಲ್ಲಿ ಬಹುತೇಕ ಎಲ್ಲ ರಂಗಗಳ ಶೇರುಗಳು ಹಸಿರು ಬಣ್ಣಕ್ಕೆ ತಿರುಗಿದ್ದವು.
ಇಂದು ಟಾಟಾ ಮೋಟರ್, ಎಸ್‌ಬಿಐ, ಎಚ್‌ಡಿಎಫ್ಸಿ, ಎಸ್ ಬ್ಯಾಂಕ್, ರಿಲಯನ್ಸ್ ಶೇರುಗಳು ತೀವ್ರ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಚ್‌ಯುಎಲ್, ರಿಲಯನ್ಸ್, ಎಚ್‌ಪಿಸಿಎಲ್, ಯುಪಿಎಲ್, ಎಸ್‌ಬಿಐ.