ಮುಂಬಯಿ : ಸುಮಾರು 700 ಅಂಕಗಳ ಏಳು ಬೀಳುಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು ಕೊನೆಗೂ 180 ಅಂಕಗಳ ಏರಿಕೆಯೊಂದಿಗೆ 35,649.94 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 66.35 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,729.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕ ಶೇರು ಪೇಟೆಯಲ್ಲಿ ಸ್ಥಿರತೆಯ ಲಕ್ಷಣ ತೋರಿ ಬರುತ್ತಿರುವುದನ್ನು ಅನುಸರಿಸಿ ಬ್ಯಾಂಕಿಂಗ್ ಶೇರುಗಳ ಭರಾಟೆಯ ಖರೀದಿ ನಡೆದ ಕಾರಣ ಇಂದು ಮುಂಬಯಿ ಶೇರು ಆರಂಭಿಕ ನಷ್ಟಗಳನ್ನೆಲ್ಲ ಕಳೆದುಕೊಂಡು ದಿನಾಂತ್ಯಕ್ಕೆ ಗೆಲುವಿನ ನಗೆ ಬೀರಿತು.
ಭಾರ್ತಿ ಏರ್ ಟೆಲ್, ಎಚ್ ಡಿ ಎಫ್ ಸಿ, ಲಾರ್ಸನ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ರಿಲಯನ್ಸ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಐಟಿಸಿ ಮತ್ತು ಬಜಾಜ್ ಫಿನಾನ್ಸ್ ಶೇರುಗಳು ಶೇ.4ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,715 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,081 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,476 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 158 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.