ಮುಂಬಯಿ : 2019ರ ಲೋಕಸಭಾ ಚುನಾವಣೆ ಪ್ರಯುಕ್ತ ಮುಂಬಯಿಯಲ್ಲಿ ಇಂದು ಮತದಾನ ನಡೆಯುತ್ತಿರುವ ಕಾರಣ ಮುಂಬಯಿ ಶೇರು ಮಾರುಕಟ್ಟೆ (BSE) ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆ (NSE) ಯಲ್ಲಿ ಇಂದು ಎ.29ರ ಸೋಮವಾರ ವ್ಯವಹಾರ ಇರುವುದಿಲ್ಲ.
ಇದೇ ರೀತಿ ಮೆಟಲ್, ಬುಲಿಯನ್ ಸೇರಿದಂತೆ ಹೋಲ್‌ಸೇಲ್ ಕಮಾಡಿಟಿ ಮಾರುಕಟ್ಟೆಗಳಲ್ಲಿ ಕೂಡ ವ್ಯವಹಾರ ಇರುವುದಿಲ್ಲ.
ಕಳೆದ ಎಪ್ರಿಲ್ 26ರ ಶುಕ್ರವಾರದಂದು ಮುಂಬಯಿ ಶೇರು ಪೇಟೆ 336.47 ಅಂಕಗಳ ಜಿಗಿತದೊಂದಿಗೆ 39,067.33 ಅಂಕಗಳ ಮಟ್ಟದಲ್ಲಿ ವಹಿವಾಟನ್ನು ಕೊನೆಗೊಳಿಸಿತ್ತು.
ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 112.90 ಅಂಕಗಳ ಏರಿಕೆಯನ್ನು ದಾಖಲಿಸಿ 11,754.70 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತ್ತು. ಅಂದು 1,065 ಶೇರುಗಳು ಮುನ್ನಡೆ ಸಾಧಿಸಿದ್ದರೆ 1,436 ಶೇರುಗಳು ಹಿನ್ನಡೆಗೆ ಗುರಿಯಾಗಿದ್ದವು ಮತ್ತು 147 ಶೇರುಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ.