ಮುಂಬಯಿ : ಈ ವರ್ಷ ಉತ್ತಮ ಮುಂಗಾರು ಮಳೆ ಇರಲಿದೆ ಎಂಬ ಹವಾಮಾನ ಇಲಾಖೆಯ ವರದಿಯಿಂದ ಗರಿಗೆದರಿದ ಮುಂಬಯಿ ಶೇರು ಪೇಟೆಯಲ್ಲಿ ಇಂದು ಹಬ್ಬದ ವಾತಾವಾರಣವೇ ನೆಲೆ ಗೊಂಡಿತು.
ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 314.92 ಅಂಕಗಳ ಅಮೋಘ ಏರಿಕೆಯನ್ನು ಕಂಡು ದಿನದ ವಹಿವಾಟನ್ನು ಹೊಸ ಸಾರ್ವಕಾಲಿಕ ದಾಖಲೆ ಎಂಬಂತೆ 30,248.17 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 90.45 ಅಂಕಗಳ ಏರಿಕೆಯನ್ನು ಕಂಡು ದಿನದ ವಹಿವಾಟನ್ನು ಹೊಸ ಸಾರ್ವಕಾಲಿಕ ದಾಖಲೆಯ ರೂಪದಲ್ಲಿ 9,407.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,619 ಶೇರುಗಳು ಮುನ್ನಡೆ ಸಾಧಿಸಿದರೆ 1,226 ಶೇರುಗಳು ಹಿನ್ನಡೆಗೆ ಗುರಿಯಾದವು. 180 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಅತ್ಯಧಿಕ ಏರಿಕೆ ಕಂಡ ಶೇರುಗಳ ಪೈಕಿ ಭಾರ್ತಿ ಏರ್‌ಟೆಲ್ ಶೇ.10ರಷ್ಟು ಏರಿಕೆಯನ್ನು ದಾಖಲಿಸಿ ವಿಜೃಂಭಿಸಿತು. ಅನಂತರದಲ್ಲಿ ಮೆರೆದ ಹಿಂದುಸ್ಥಾನ್ ಯುನಿಲಿವರ್ ಶೇರು ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿತು.