ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇ.0.25ರಷ್ಟು ಏರಿಸಿದ ಕಾರಣ ಏಶ್ಯನ್ ಶೇರು ಪೇಟೆಗಳು ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮಂಕಾದ ಹೊರತಾಗಿಯೂ ಮುಂಬಯಿ ಶೇರು ಪೇಟೆ ತನ್ನೊಳಗಿನ ಭಯವನ್ನು ಕೊಡವಿ ಎದ್ದು ನಿಂತು 74 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟು ಕೇವಲ 9.37 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 31,165.28 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.90 ಅಂಕಗಳ ನಷ್ಟಕ್ಕೆ ಗುರಿಯಾಗಿ 9,608.25 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತ್ತು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ, ರಿಲಯನ್ಸ್, ಆರಬಿಂದೋ ಫಾರ್ಮಾ, ಎಸ್ ಬ್ಯಾಂಕ್, ವೇದಾಂತ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳ ಸಾಲಿನಲ್ಲಿ ಅರಬಿಂದೋ ಫಾರ್ಮಾ, ಡಾ. ರೆಡ್ಡಿ, ರಿಲಯನ್ಸ್, ಸನ್ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್ ಕಾಣಿಸಿಕೊಂಡರೆ, ಟಾಪ್ ಲೂಸರ್‌ಗಳ ಸಾಲಿನಲ್ಲಿ ಬಿಪಿಸಿಎಲ್, ಗೇಲ್, ಕೋಲ್ ಇಂಡಿಯಾ, ಎಚ್‌ಸಿಎಲ್ ಟೆಕ್, ಏಶ್ಯನ್ ಪೇಂಟ್ ಕಾಣಿಸಿಕೊಂಡವು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇ.0.25ರಷ್ಟು ಏರಿಸಿರುವ ಕಾರಣ ಮುಂಬಯಿ ಸಹಿತ ಏಶ್ಯನ್ ಶೇರುಪೇಟೆಗಳಲ್ಲಿ ಎಚ್ಚರದ ನಡೆ ಕಂಡುಬಂದಿದೆ.