ಮುಂಬಯಿ : ಲಾಭ ನಗದೀಕರಣದ ಫಲವಾಗಿ ಮುಂಬಯಿ ಶೇರು ಪೇಟೆ ಇಂದು ಗುರುವಾರ ಬೆಳಗ್ಗಿನ ತನ್ನ ಎಲ್ಲ ಏರಿಕೆಯನ್ನು ಸಂಜೆಯೊಳಗೆ ಬಿಟ್ಟುಕೊಟ್ಟು ದಿನದ ವಹಿವಾಟನ್ನು 30,000 ಅಂಕಗಳಿಗಿಂತ ಮೇಲ್ಮಟ್ಟದಲ್ಲೇ ಕೊನೆಗೊಳಿಸಿದ್ದೇ ಒಂದು ಸಮಾಧಾನದ ವಿಷಯವೆನಿಸಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಕೇವಲ 2.81 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 30,250.98 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೇವಲ 15.10 ಅಂಕಗಳ ಏರಿಕೆಯನ್ನು ಉಳಿಸಿಕೊಂಡು ದಿನದ ವಹಿವಾಟನ್ನು 9,422.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,246 ಶೇರುಗಳು ಮುನ್ನಡೆ ಸಾಧಿಸಿದರೆ 1,588 ಶೇರುಗಳು ಹಿನ್ನಡೆಗೆ ಗುರಿಯಾದವು. 169 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ದ್ವಿಚಕ್ರ ವಾಹನದ ಶೇರುಗಳ ದಿನದ ಉದ್ದಕ್ಕೂ ಮುನ್ನಡೆ ಸಾಧಿಸಿದವು. ಇವುಗಳನ್ನು ಅನುಸರಿಸಿ ಝೀ ಎಂಟರ್‌ಟೇನ್‌ಮೆಂಟ್, ತೈಲ ಮತ್ತು ಅನಿಲ ಶೇರುಗಳು ಹಾಗೂ ಭಾರ್ತಿ ಏರ್‌ಟೆಲ್ ಮುನ್ನುಗ್ಗಿದ್ದವು.
ಮಿಡ್ ಕ್ಯಾಪ್ ಶೇರುಗಳು ಇಂದು ಬಹುತೇಕ ಫ್ಲ್ಯಾಟ್ ಆಗಿದ್ದವು. ಐಟಿ, ಮೆಟಲ್ ಶೇರುಗಳು ಧನಾತ್ಮಕವಾಗಿ ಕೊನೆಗೊಂಡವು.