ಮುಂಬಯಿ : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೊದಲಿನ ಸೆಮಿ ಫೈನಲ್ ಎಂದೇ ಪರಗಣಿಸಲ್ಪಟ್ಟಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 114 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ಸಾಗುತ್ತಿರುವ ಕಾರಣಕ್ಕೆ ಗರಿಗೆದರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 313 ಅಂಕಗಳ ಭರ್ಜರಿ ಮುನ್ನಡೆ ದಾಖಲಿಸಿತು.
ಏಶ್ಯನ್ ಶೇರು ಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆಗೆ ಇಂದು ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಗೆಲುವಿನತ್ತ ಮುನ್ನಡೆ ಸಾಧಿಸಿರುವುದ ವಿಶೇಷ ಹುರುಪು, ಚೈತನ್ಯ ನೀಡಿತು.
ಬೆಳಗ್ಗೆ 10.46ರ ಹೊತ್ತಿಗೆ ಸೆನ್ಸೆಕ್ಸ್ 313.07 ಅಂಕಗಳ ಪ್ರಬಲ ಮುನ್ನಡೆಯನ್ನು ದಾಖಲಿಸಿ 35,869.78 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 85.00 ಅಂಕಗಳ ಮುನ್ನಡೆಯೊಂದಿಗೆ 10,891.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಪವರ್ ಗ್ರಿಡ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್ ಯು ಎಲ್, ಟಾಟಾ ಸ್ಟೀಲ್, ರಿಲಯನ್ಸ್ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಜಾಜ್ ಫಿನಾನ್ಸ್, ಪವರ್ ಗ್ರಿಡ್ ಕಾರ್ಪ್, ಟಾಟಾ ಸ್ಟೀಲ್, ಎಸ್ ಬ್ಯಾಂಕ್, ಕೋಟಕ್ ಮಹೀಂದ್ರ; ಟಾಪ್ ಲೂಸರ್‌ಗಳು: ಟಾಟಾ ಮೋಟರ್, ಎಚ್‌ಪಿಸಿಎಲ್, ಅದಾನಿ ಪೋರ್ಟ್, ಗ್ರಾಸಿಂ, ಐಟಿಸಿ.
ಡಾಲರ್ ಎದುರು ರೂಪಾಯಿ ಇಂದು ಆರಂಭಿಕ ವಹಿವಾಟಿನಲ್ಲಿ 28 ಪೈಸೆಗಳ ಕುಸಿತಕ್ಕೆ ಗುರಿಯಾಗಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾಗಿ 67.79 ರೂ. ನಲ್ಲಿ ದಾಖಲಾಯಿತು.