ಮುಂಬಯಿ : ನಿರಂತರ ಐದನೇ ದಿನವೂ ತನ್ನ ಏರುಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 192.35 ಅಂಕಗಳ ಏರಿಕೆಯೊಂದಿಗೆ 36,578.96 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಿಲಯನ್ಸ್ ಕಂಪೆನಿಯ ಶೇರು ಧಾರಣೆ ಇಂದು ಶೇ.4ಷ್ಟು ಏರಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 54.90 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,961.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ಶೇರು ಪೇಟೆಗಳಲ್ಲಿ ಧನಾತ್ಮಕತೆ ತೋರಿ ಬಂದಿರುವುದನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಬ್ಲೂ ಚಿಪ್ ಕಂಪೆನಿಗಳ ಶೇರುಗಳನ್ನು ವ್ಯಾಪಕವಾಗಿ ಖರೀದಿಸಿದ್ದೇ ಮುಂಬಯಿ ಶೇರು ಪೇಟೆಯ ಇಂದಿನ ತೇಜಿಗೆ ಕಾರಣವಾಗಿತ್ತು. ಇಂದು ವಹಿವಾಟಿನ ನಡುವೆ ಸೆನ್ಸೆಕ್ಸ್ ಒಮ್ಮೆ 533.05 ಅಂಕಗಳ ಏರಿಕೆಯನ್ನು ದಾಖಲಿಸಿ 36,701.03 ಅಂಕಗಳ ಎತ್ತರವನ್ನು ಕಂಡಿತ್ತು.
ಇಂದಿನ ವಹಿವಾಟಿನಲ್ಲಿ ಕೋಟ್ ಬ್ಯಾಂಕ್, ಬಜಾಜ್ ಫಿನಾನ್ಸ್, ಇನ್ಫೋಸಿಸ್, ಏಶ್ಯನ್ ಪೇಂಟ್, ಟಿಸಿಎಸ್, ಎಚ್‌ಯುಎಲ್, ಟಾಟಾ ಸ್ಟೀಲ್ ಮತ್ತು ವೇದಾಂತ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಇದೇ ವೇಳೆ ಹೀರೋ ಮೋಟೋ ಕಾರ್ಪ್, ಎಸ್ ಬ್ಯಾಂಕ್, ಮಾರುತಿ ಸುಜುಕಿ, ಟಾಟಾ ಮೋಟರ್, ಬಜಾಜ್ ಆಟೋ, ಪವರ್ ಗ್ರಿಡ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,733 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 938 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,657 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 178 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.