ಮುಂಬಯಿ : ಏಶ್ಯನ್ ಶೇರುಪೇಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿದ ಮುಂಬಯಿ ಶೇರು ಮಾರುಕಟ್ಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 149 ಅಂಕಗಳ ಜಿಗಿತವನ್ನು ಸಾಧಿಸಿತು.
ನಿನ್ನೆ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಂಡ ಕಾರಣಕ್ಕೆ ನಿಸ್ತೇಜಗೊಂಡಿದ್ದ ಮುಂಬಯಿ ಶೇರು ಪೇಟೆ 205 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಮುಂಬಯಿ ಶೇರು ಪೇಟೆ 199.94 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32797.12 ಅಂಕಗಳ ಮಟ್ಟದಲ್ಲಿಯೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65.90 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡ 10,110.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಬೆಳಗ್ಗೆ ಐದು ಪೈಸೆಯಷ್ಟು ಸುಧಾರಿಸಿದ್ದು ಇಂದಿನ ವಹಿವಾಟಿನಲ್ಲಿ ಕ್ಯಾಪಿಟಲ್ ಗೂಡ್ಸ್, ಪವರ್, ತೈಲ ಮತ್ತು ಅನಿಲ ಹಾಗೂ ಪಿಎಸ್‌ಯು ರಂಗದ ಶೇರುಗಳ ನೇತೃತ್ವದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳ ಶೇರುಗಳು ಮುನ್ನಡೆ ಕಂಡವು.
ಮಾರುತಿ ಸುಜುಕಿ, ರಿಲಯನ್ಸ್, ಗೇಲ್, ಎಸ್‌ಬಿಐ, ಇನ್‌ಫೋಸಿಸ್ ಶೇರುಗಳು ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.