ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಸ್ಥಿರ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಎರಡನೇ ದಿನವೂ ಲಾಭದ ಹಾದಿಯಲ್ಲಿ ಮುನ್ನುಗ್ಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 34,476,70 ಅಂಕಗಳ ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪಿತು.
ಇದೇ ರೀತಿ ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಸಾರ್ವಕಾಲಿಕ ಎತ್ತರವಾಗಿ 10,887.10 ಅಂಕಗಳ ಮಟ್ಟಕ್ಕೆ ಏರಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 348.63 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,430.45 ಅಂಕಗಳ ಮಟ್ಟದಲ್ಲೂ, ನಿಫ್ಟಿ 78.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,866.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವಿದೇಶೀ ಹೂಡಿಕೆ ಭಾರತೀಯ ಶೇರು ಮಾರುಕಟ್ಟೆಗಳತ್ತ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಬ್ಯಾಂಕಿಂಗ್ ಶೇರುಗಳು ಭರಾಟೆಯ ಖರೀದಿಯನ್ನು ಕಂಡವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 394.88 ಅಂಕಗಳ ಭರ್ಜರಿ ಏರಕೆಯನ್ನು ಪಡೆದುಕೊಂಡು ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 35,476.70 ಅಂಕಗಳ ಮಟ್ಟವನ್ನು ತಲುಪಿತು. ಇದೇ ರೀತಿ ನಿಫ್ಟಿ ಕೂಡ 98.55 ಅಂಕಗಳ ಏರಿಕೆಯನ್ನು ದಾಖಲಿಸಿ ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 10,887.10 ಅಂಕಗಳ ಮಟ್ಟವನ್ನು ತಲುಪಿತು.
ಬ್ಯಾಂಕಿಂಗ್ ವರ್ಗದಲ್ಲಿ ಎಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು.
ಇತರ ಟಾಪ್ ಗೇನರ್ ಶೇರುಗಳೆಂದರೆ ಹೀರೋ ಮೋಟೋ ಕಾರ್ಪ್, ಮಹೀಂದ್ರ, ಲಾರ್ಸನ್, ಡಾ. ರೆಡ್ಡಿ, ಐಟಿಸಿ, ಬಜಾಜ್ ಆಟೋ, ಒಎನ್‌ಜಿಸಿ ಮತ್ತು ಸನ್ ಫಾರ್ಮಾ.