ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ದಾಖಲೆಯ 37,000 ಅಂಕಗಳ ಮಟ್ಟವನ್ನು ದಾಟಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಸಾರ್ವಕಾಲಿಕ ದಾಖಲೆಯ ಹೊಸ ಎತ್ತರವಾಗಿ 11,172.20 ಅಂಕಗಳ ಮಟ್ಟವನ್ನು ತಲುಪಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಕ್ಯಾಪಿಟಲ್ ಗೂಡ್ಸ್, ಎಫ್ಎಂಸಿಜಿ, ರಿಯಲ್ಟಿ ಮತ್ತು ಬ್ಯಾಂಕಿ,ಗ್ ಶೇರುಗಳು ಭರಾಟೆಯ ಖರೀದಿಯನ್ನು ಕಂಡವು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 140.46 ಅಂಕಗಳ ಮುನ್ನಡೆಯನ್ನು ಕಾಯ್ದಕೊಂಡು 36,998.69 ಅಂಕಗಳ ಮಟ್ಟದಲ್ಲೂ , ನಿಫ್ಟಿ 40.40 ಅಂಕಗಳ ಮುನ್ನಡೆಯೊಂದಿಗೆ 11,172.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ಗೇನರ್‌ಗಳಾಗಿ ಮೂಡಿ ಬಂದ ಎಸ್‌ಬಿಐ, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಐಟಿಸಿ, ಕೋಲ್ ಇಂಡಿಯಾ, ಲಾರ್ಸನ್, ಒಎನ್‌ಜಿಸಿ, ಎಚ್‌ಡಿಎಫ್ಸಿ ಬ್ಯಾಂಕ್, ಆರ್‌ಐಎಲ್, ಮಾರುತಿ, ಮಹೀಂದ್ರ, ಬಜಾಜ್ ಆಟೋ, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಚ್ ಡಿ ಎಫ್ ಸಿ ಶೇರುಗಳು ಶೇ.1.79ರ ಏರಿಕೆಯನ್ನು ದಾಖಲಿಸಿದವು.
ಟಾಪ್ ಲೂಸರ್‌ಗಳಲ್ಲಿ ಏಶ್ಯನ್ ಪೇಂಟ್, ಹೀರೋ ಮೋಟೋ ಕಾರ್ಪ್, ವಿಪ್ರೋ, ಇನ್‌ಫೋಸಿಸ್ ಶೇ.1ರ ಇಳಿಕೆಯನ್ನು ಅನುಭವಿಸಿದವು.
ಡಾಲರ್ ಎದುರು ರೂಪಾಯಿ ಇಂದು ನಿರಂತರ ಎರಡನೇ ದಿನದ ಏರಿಕೆಯನ್ನು ಕಂಡು 10 ಪೈಸೆಯಷ್ಟು ಸುಧಾರಿಸಿ 68.69 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.