ಮುಂಬಯಿ : ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಗುರುವಾರ ಸಂಜೆ ಮುಕ್ತಾಯಗೊಳ್ಳುವ ಬೆನ್ನಿಗೇ ಪ್ರಕಟಗೊಳ್ಳಲಿರುವ ಎಕ್ಸಿಟ್ ಪೋಲ್ (ಮತದಾನೋತ್ತರ ಸಮೀಕ್ಷೆ) ಬಗ್ಗೆ ಆಶಾಭಾವನೆ ಹೊಂದಿರುವಂತೆ ಕಂಡು ಬಂದಿರುವ ಮುಂಬಯಿ ಶೇರು ಪೇಟೆ ಇಂದಿನ ವಹಿವಾಟನ್ನು 193.66 ಅಂಕಗಳ ಮುನ್ನಡೆಯೊಂದಿಗೆ 33,246.70 ಅಂಕಗಳ ಮಟ್ಟದಲಿ ವಿಶ್ವಾಸಭರಿತವಾಗಿ ಮುಗಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 59.10 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,252.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಐರೋಪ್ಯ ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲೇ ವ್ಯವಹಾರ ನಿರತವಾಗಿದ್ದವು. ಅಮೆರಿಕ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇ.0.25ರಷ್ಟು ಏರಿಸಿದ ಕಾರಣ ಐರೋಪ್ಯ ಶೇರು ಮಾರುಕಟ್ಟೆಗಳಲ್ಲಿ ಎಚ್ಚರಿಕೆಯ ನಡೆ ಕಂಡು ಬಂದಿತ್ತು.
ಫೆಡ್ ರೇಟ್ ಏರಿಸಲಾದ ಹೊರತಾಗಿಯೂ ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 16 ಪೈಸೆಯಷ್ಟು ಚೇತರಿಸಿಕೊಂಡದ್ದು ಗುಜರಾತ್ ಇಫೆಕ್ಟ್ ಎಂದೇ ತಿಳಿಯಲಾಗಿದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ ಪ್ರತೀ ಮೂರು ಶೇರುಗಳು ಕುಸಿತ ಕಂಡರೆ ಎರಡು ಶೇರುಗಳು ಮುನ್ನಡೆ ಸಾಧಿಸಿದವು.