ಮುಂಬಯಿ : ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಅದಕ್ಕೆ ಮುನ್ನ ವಹಿವಾಟುದಾರರು ತಮ್ಮಲ್ಲಿನ ಶೇರು ದಾಸ್ತಾನನ್ನು ಕಡಿತಗೊಳಿಸಲು ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 124 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ಸ್ವಲ್ಪ ಮಟ್ಟಿನ ಕುಸಿತ ಕಂಡಿರುವುದು ಮತ್ತು ಶೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆ ಹಿಂದಕ್ಕೆ ಹೋಗುತ್ತಿರುವುದು ಕೂಡ ದೇಶೀಯ ವಹಿವಾಟುದಾರರ ಉತ್ಸಾಹವನ್ನು ತಗ್ಗಿಸಿತು.
ನಿನ್ನೆ ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 249.52 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದು ಇಂದು ಮತ್ತೆ ನಷ್ಟದ ಹಾದಿಯಲ್ಲಿನ ಪಯಣ ಮುಂದುವರಿಯಿತು. ಪರಿಣಾಮವಾಗಿ ಐಟಿ, ಹೆಲ್ತ್ ಕೇರ, ಟೆಕ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 54.43 ಅಂಕಗಳ ನಷ್ಟದೊಂದಿಗೆ 35,979.30 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.20 ಅಂಕಗಳ ನಷ್ಟದೊಂದಿಗೆ 11,040.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಎಸ್‌ಬಿಐ ಮತ್ತು ಹಿಂಡಾಲ್ಕೊ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.