ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದು ಹಾಗೂ ಸರಕಾರ ಇಂದು ಸಂಜೆಯೊಳಗಾಗಿ ದೇಶದ ಸ್ಥೂಲ ಆರ್ಥಿಕ ಪ್ರಗತಿಯ ಅಂಕಿ ಅಂಶ ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 250 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,500ರ ಮನೋಪ್ರಾಬಲ್ಯದ ಮಟ್ಟಕ್ಕಿಂತ ಕೆಳಕ್ಕೆ ಜಾರಿತು.
ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿರುವುದು, ವಿದೇಶಿ ಬಂಡವಾಳ ನಿರಂತರವಾಗಿ ಹೊರ ಹರಿವನ್ನು ಕಾಣುತ್ತಿರುವುದು ಕೂಡ ಶೇರು ಮಾರುಕಟ್ಟೆಯ ಉತ್ಸಾಹವನ್ನು ಬಹುಮಟ್ಟಿಗೆ ಕುಗ್ಗಿಸಿತು. ನಿನ್ನೆ ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್ 100 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತ್ತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 152.36 ಅಂಕಗಳ ನಷ್ಟದೊಂದಿಗೆ 34,194.03 ಅಂಕಗಳ ಮಟ್ಟದಲ್ಲೂ ನಿಫಿಟ 53.40 ಅಂಕಗಳ ನಷ್ಟದೊಂದಿಗೆ 10,500.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಮಾರುತಿ ಸುಜುಕಿ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.