ಮುಂಬಯಿ : ನಿರಂತರ ನಾಲ್ಕನೇ ದಿನ ತನ್ನ ಏರು ಗತಿಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 90 ಅಂಕಗಳ ಜಿಗಿತದೊಂದಿಗೆ 36,725.42 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿಯ ಬಲವರ್ಧನೆಯ ಪರಿಣಾಮವಾಗಿ ವಿದೇಶಿ ಬಂಡವಾಳದ ಒಳ ಹರಿವು ಉತ್ತಮವಾಗಿ ಸಾಗಿ ಬರುತ್ತಿರುವುದು ಕೂಡ ಶೇರು ಪೇಟೆಯ ತೇಜಿಗೆ ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 5 ಅಂಕಗಳ ಮುನ್ನಡೆಗೆ ತೃಪ್ತವಾಗಿ ದಿನದ ವಹಿವಾಟನ್ನು 11,058.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಎಲ್ ಆ್ಯಂಡ್ ಟಿ ಶೇರು ಇಂದು ಶೇ.2.76ರ ಜಿಗಿತವನ್ನು ದಾಖಲಿಸಿತಾದರೆ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಐಟಿಸಿ, ಎಸ್‌ಬಿಐ, ಎಚ್ ಡಿ ಎಫ್ ಸಿ, ಪವರ್ ಗ್ರಿಡ್, ಟಾಟಾ ಮೋಟರ್, ಟಿಸಿಎಸ್, ಟಾಟಾ ಸ್ಟೀಲ್, ರಿಲಯನ್ಸ್ ಶೇರುಗಳು ಇಂದು ಶೇ.1.77ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,819 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,309 ಶೇರುಗಳು ಮುನ್ನಡೆ ಸಾಧಿಸಿದವು; 1,349 ಶೇರುಗಳು ಹಿನ್ನಡೆಗೆ ಗುರಿಯಾದವು; 161 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.