ಮುಂಬಯಿ : ಸೆಪ್ಟಂಬರ್ ವಾಯಿದೆ ವಹಿವಾಟು ಚುಕ್ತಾ ಮಾಡಲು ನಾಳೆ ಗುರುವಾರ ಅಂತಿಮ ದಿನವಾಗಿರುವಂತೆಯೇ ಎಚ್ಚರಿಕೆಯ ನಡೆ ಇರಿಸಿರುವ ಮುಂಬಯಿ ಶೇರು ಪೇಟೆ, ಇಂದು ಬುಧವಾರದ ವಹಿವಾಟನ್ನು 439.95 ಅಂಕಗಳ ಭಾರೀ ನಷ್ಟದೊಂದಿಗೆ 31,159.81 ಅಂಕಗಳ ಮಟ್ಟಕ್ಕೆ ಕುಸಿಯುವಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 135.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,735.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 582 ಶೇರುಗಳು ಮಾತ್ರವೇ ಇಂದು ಮುನ್ನಡೆಯನ್ನು ಕಂಡವು; 1,951 ಶೇರುಗಳು ಹಿನ್ನಡೆಗೆ ಗುರಿಯಾದವು; 135 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ. ಒಟ್ಟಂದದಲ್ಲಿ ವಹಿವಾಟಿನ ಹರಹು ದುರ್ಬಲವಾಗಿತ್ತು.
ಇಂದಿನ ವಹಿವಾಟಿನಲ್ಲಿ ಮಿಡ್ ಕ್ಯಾಪ್, ಪಿಎಸ್‌ಯು ಬ್ಯಾಂಕುಗಳು ಮತ್ತು ಫಾರ್ಮಾ ಶೇರುಗಳು ಕುಸಿದವು. ಆದರೆ ಐಟಿ ಶೇರುಗಳು ಎಲ್ಲ ಪ್ರತಿಕೂಲ ಸನ್ನಿವೇಶಗಳನ್ನು ತಾಳಿಕೊಂಡು ಬಾಳಿದವು.
ಟಿಸಿಎಸ್, ಕೋಲ್ ಇಂಡಿಯಾ ಮತ್ತು ಭಾರ್ತಿ ಇನ್‌ಫ್ರಾಟೆಲ್ ಟಾಪ್ ಗೇನರ್ ಎನಿಸಿಕೊಂಡರೆ, ಅದಾನಿ ಪೋರ್ಟ್, ಸನ್ ಫಾರ್ಮಾ ಹಿನ್ನಡೆಗೆ ಗುರಿಯಾದವು.
ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಂದು ದಿಲ್ಲಿಯಲ್ಲಿ ನಡೆದ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಮಾತನಾಡಿ ಪ್ರಧಾನಿಯವರ ಡಿಜಿಟಲ್ ಇಂಡಿಯಾ ದೃಷ್ಟಾರತೆಯನ್ನು ಸ್ವಾಗತಿಸಿ ಭಾರತದಲ್ಲಿ ಡಿಜಿಟಲ್‌ವುೂಲ ಸೌಕರ್ಯವನ್ನು ರೂಪಿಸಬೇಕು ಎಂದು ಕರೆ ನೀಡಿದರು.