ಮುಂಬಯಿ : ನಿರಂತರ ನಾಲ್ಕು ದಿನಗಳಿಂದ ಏರು ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು ಕೊನೆಗೂ ನಷ್ಟದಲ್ಲಿ ಮುಗಿಸಿದೆ.
ವಹಿವಾಟಿನ ಕೊನೇ ತಾಸಿನಲ್ಲಿ ಕಂಡು ಬಂದ ಮಾರಾಟದ ಒತ್ತಡಕ್ಕೆ ಸಿಲುಕಿದ ಸೆನ್ಸೆಕ್ಸ್ 79.68 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 31,592.03 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.20 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,888.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳಲ್ಲಿ 1,493 ಶೇರುಗಳು ಮುನ್ನಡೆ ಕಂಡವಾದರೆ, 1,148 ಶೇರುಗಳು ಹಿನ್ನಡೆಗೆ ಗುರಿಯಾದವು; 106 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಎನ್‌ಟಿಪಿಸಿ, ಕೋಲ್ ಇಂಡಿಯಾ, ಅರಬಿಂದೋ ಫಾರ್ಮಾ ಮತ್ತು ಅಂಬುಜಾ ಸಿಮೆಂಟ್ಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಐಸಿಐಸಿಐ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಟೆಕ್ ಮಹೀಂದ್ರ ಮತ್ತು ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ರಿಲಯನ್ಸ್ ಮತ್ತು ಇನ್‌ಫೋಸಿಸ್ ಶೇರುಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾದದ್ದು ಇಂದಿನ ವಿಶೇಷ.