ಮುಂಬಯಿ : ಕೇಂದ್ರ ಸರಕಾರ ಸಾರ್ವಜನಿಕ ರಂಗದ 12 ಬ್ಯಾಂಕುಗಳಿಗೆ 48,239 ಕೋಟಿ ರೂ. ಪುನರ್ ಧನ ಒದಗಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದೇಶ ಮತ್ತು ವಿದೇಶ ಹೂಡಿಕೆದಾರ ಸಂಸ್ಥೆಗಳು ಬ್ಯಾಂಕಿಂಗ್ ರಂಗದ ಶೇರುಗಳನ್ನು ಭರಾಟೆಯಿಂದ ಖರೀದಿಸಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟಿನಲ್ಲಿ, ನಿರಂತರ ಎರಡನೇ ದಿನ, 142.09 ಅಂಕಗಳ ಮುನ್ನಡೆಯನ್ನು ಸಾಧಿಸಿ 35,898.35 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 54.40 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,789.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮಾತ್ರವಲ್ಲದೆ ಫಾರ್ಮಾ, ಮೆಟಲ್, ಆಟೋ ರಂಗದ ಶೇರುಗಳು ಕೂಡ ಉತ್ತಮ ಖರೀದಿಯನ್ನು ಕಂಡವು. ಟಾಟಾ ಸ್ಟೀಲ್ ಶೇರು ಇಂದು 2.94ರ ಏರಿಕೆಯನ್ನು ದಾಖಲಿಸಿ ಟಾಪ್ ಗೇನರ್ ಎನಿಸಿತು.
ಉಳಿದಂತೆ ವೇದಾಂತ, ಬಜಾಜ್ ಫಿನಾನ್ಸ್, ಸನ್ ಫಾರ್ಮಾ, ಒಎನ್‌ಜಿಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ, ಆರ್‌ಐಎಲ್, ಲಾರ್ಸನ್, ಎಸ್‌ಬಿಐ ಶೇರುಗಳು ಶೇ.2.78 ಜಿಗಿತವನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,699 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,586 ಶೇರುಗಳು ಮುನ್ನಡೆ ಸಾಧಿಸಿದವು; 986 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.