ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿನ ದುರ್ಬಲ ಪ್ರವೃತ್ತಿ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನ ಕಾರಣ ಉಂಟಾಗಿರುವ ಮಾರಾಟ ಒತ್ತಡದ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 68 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ನಿರಂತರವಾಗಿ ಸವೆಯುತ್ತಿರುವುದು ಶೇರು ಮಾರುಕಟ್ಟೆಗೆ ಕಳವಳದ ವಿಷಯವಾಗಿರುವುದು ಕೂಡ ಮುಂಬಯಿ ಶೇರು ಪೇಟೆಯಲ್ಲಿನ ನಿಸ್ತೇಜತೆಗೆ ಕಾರಣವಾಗಿದೆ.
ಹಾಗಿದ್ದರೂ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 63.33 ಅಂಕಗಳ ಮುನ್ನಡೆಯೊಂದಿಗೆ 35,327.74 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.60 ಅಂಕಗಳ ಮುನ್ನಡೆಯೊಂದಿಗೆ 10,674.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ವೇದಾಂತ, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಎಚ್ ಡಿ ಎಫ್ ಸಿ, ಐಟಿ, ವಿಪ್ರೋ, ಮಹೀಂದ್ರ, ಕೋಟಕ್ ಬ್ಯಾಂಕ್, ಕೋಲ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ಮಾರುತಿ ಸುಜುಕಿ ಮತ್ತು ಅದಾನಿ ಪೋರ್ಟ್ ಶೇರುಗಳು ಶೇ.3.31 ರಷ್ಟು ಕುಸಿತಕ್ಕೆ ಗುರಿಯಾದವು.
ಡಾಲರ್ ಎದುರಿನ ತನ್ನ ನಷ್ಟವನ್ನು ಇಂದು ಮಂಗಳವಾರ ಬೆಳಗ್ಗೆ ಕೂಡ ಮುಂದುವರಿಸಿದ ರೂಪಾಯಿ 16 ಪೈಸೆಯಷ್ಟು ದುರ್ಬಲವಾಗಿ 68.96 ರೂ. ವಿನಿಮಯ ದರದಲ್ಲಿ ವ್ಯವಹಾರ ನಿರತವಾಗಿತ್ತು.