ಮುಂಬಯಿ : ನವೆಂಬರ್ ತಿಂಗಳ ವಾಯಿದೆ ವಹಿವಾಟು ಸರಣಿ (F&O) ದುರ್ಬಲವಾಗಿ ಆರಂಭಗೊಂಡಿರುವಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 297 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,100 ಅಂಕಕ್ಕಿಂತ ಕೆಳ ಮಟ್ಟಕ್ಕೆ ಜಾರಿತು.
ವಿದೇಶಿ ಬಂಡವಾಳದ ಮುಂದುವರಿದ ಹೊರ ಹರಿವು, ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದ ದೌರ್ಬಲ್ಯ, ಡಾಲರ್ ಎದುರು ರೂಪಾಯಿಯ ಅಸ್ಥಿರತೆ ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ನಿರಂತ ಎರಡನೇ ದಿನವೂ ಕುಸಿತಕ್ಕೆ ಗುರಿಯಾಯಿತು.
ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ 106.28 ಅಂಕಗಳ ನಷ್ಟದೊಂದಿಗೆ 33,583.81 ಅಂಕಗಳ ಮಟ್ಟದಲ್ಲೂ , ನಿಫ್ಟಿ ಸೂಚ್ಯಂಕ 40.40 ಅಂಕಗಳ ನಷ್ಟದೊಂದಿಗೆ 10,084.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಎನ್ ಟಿ ಪಿ ಸಿ, ಏಶ್ಯನ್ ಪೇಂಟ್, ವೇದಾಂತ, ಭಾರ್ತಿ ಏರ್ ಟೆಲ್, ಟಿಸಿಎಸ್, ಕೋಲ್ ಇಂಡಿಯಾ, ಇನ್‌ಫೋಸಿಸ್, ಮಾರುತಿ ಸುಜುಕಿ, ಕೋಟಕ್ ಬ್ಯಾಂಕ್, ಐಟಿಸಿ, ಎಲ್ ಆ್ಯಂಡ್ ಟಿ, ಎಸ್‌ಬಿಐ ಮೊದಲಾದ ಶೇರುಗಳು ಶೇ.6ರಷ್ಟು ಕುಸಿದವು.
ಹಾಗಿದ್ದರೂ ಟಾಟಾ ಮೋಟರ್ ಮತ್ತು ಅದಾನಿ ಪೋರ್ಟ್ ಶೇ.1.81ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 17 ಪೈಸೆಯ ಕುಸಿತವನ್ನು 73.44 ರೂ. ಮಟ್ಟಕ್ಕೆ ಜಾರಿದುದು ಕೂಡ ಮುಂಬಯಿ ಶೇರು ಪೇಟೆಯ ಹಿನ್ನಡೆಗೆ ಕಾರಣವಾಯಿತು.