ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 41.86 ಅಂಕಗಳ ನಷ್ಟಕ್ಕೆ ಗುರಿಯಗಿ 32,900.01 ಅಂಕಗಳ ಮಟ್ಟಕ್ಕೆ ಜಾರಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 16.70 ಅಂಕಗಳ ನಷ್ಟಕ್ಕೆ ಗುರಿಯಾಗಿ 10,169.90 ಅಂಕಗಳ ಮಟ್ಟಕ್ಕೆ ಇಳಿಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 105.06 ಅಂಕಗಳ ನಷ್ಟದೊಂದಿಗೆ 32,836.81 ಅಂಕಗಳ ಮಟ್ಟದಲ್ಲೂ ನಿಫ್ಟಿ 37.80 ಅಂಕಗಳ ನಷ್ಟದೊಂದಿಗೆ 10,148.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಪ್ರತೀ ಎರಡು ಶೇರು ಏರಿಕೆಗೆ ಪ್ರತಿಯಾಗಿ ಪ್ರತೀ ಮೂರು ಶೇರುಗಳು ಇಂದು ಕುಸಿತ ಕಂಡವು. ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರುತ್ತಿರುವುದು ಕೂಡ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿದೆ.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಇಳಿಕೆ ಪ್ರವೃತ್ತಿ ಹಾಗೂ ಅಮೆರಿಕನ್ ಶೇರು ಮಾರುಕಟ್ಟೆ ನಿನ್ನೆ ಮಂಗಳವಾರದ ವಹಿವಾಟನ್ನು ಕೆಳಮಟ್ಟದಲ್ಲಿ ಮುಗಿಸಿರುವುದು ಮುಂಬಯಿ ಶೇರು ಪೇಟೆಯಲ್ಲಿ ಇಂದು ನಿಸ್ತೇಜ ವಾತಾವರಣ ಸೃಷ್ಟಿಸಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರೇನ್ ಇಂಡಸ್ಟ್ರೀಸ್, ಎಚ್‌ಇಜಿ, ಗ್ರೆಫೈಟ್ ಇಂಡಿಯಾ, ಗೋವಾ ಕಾರ್ಬನ್, ಫಿಲಿಪ್ಸ್ ಕಾರ್ಬನ್ ಶೇ.5ರಷ್ಟು ಕುಸಿತಕ್ಕೆ ಗುರಿಯಾದವು.