ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ನಿರಂತರ ನಾಲ್ಕನೇ ದಿನ ಹೊಸ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿತು. ಎಸ್ ಬಿ ಐ, ಐಸಿಐಸಿ ಬ್ಯಾಂಕ್ ಸೇರಿದಂತೆ ಮುಂಚೂಣಿ ಶೇರುಗಳ ಖರೀದಿಯಲ್ಲಿ ಕಂಡು ಬಂದ ಭರಾಟೆಯ ಖರೀದಿಯೇ ಸೆನ್ಸೆಕ್ಸ್ ನ ಈ ಸಾಧನೆಗೆ ಇಂದು ಕಾರಣವಾಯಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ 37,000 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರದ ಮಟ್ಟವನ್ನು ತಲುಪಿತು. ಆದರೆ ಅನಂತರದಲ್ಲಿ ಈ ಮಟ್ಟದಿಂದ ಹಿಂದೆ ಸರಿಯಿತು.
ಹಲವು ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶ ನಿರೀಕ್ಷೆಗೂ ಮೀರಿ ಉತ್ತಮವಾಗಿರುವುದು ಮುಂಬಯಿ ಶೇರು ಮಾರುಕಟ್ಟೆಯ ತೇಜಿಗೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 507 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ. ಇಂದು ಗುರುವಾರದ ವಹಿವಾಟನ್ನು ಸೆನ್ಸೆಕ್ಸ್ 126.41 ಅಂಕಗಳ ಏರಿಕೆಯೊಂದಿಗೆ 36,984.64 ಅಂಕಗಳ ಮಟ್ಟದಲ್ಲೂ, ನಿಫ್ಟಿ 35.30 ಅಂಕಗಳ ಏರಿಕೆಯೊಂದಿಗೆ 11,167.30 ಅಂಕಗಳ ಮಟ್ಟದಲ್ಲೂ ಕೊನೆಗೊಳಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಗುರುವಾರ ಒಟ್ಟು 2,711 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,354 ಶೇರುಗಳು ಮುನ್ನಡೆ ಸಾಧಿಸಿದವು; 1,217 ಶೇರುಗಳು ಹಿನ್ನಡೆಗೆ ಗುರಿಯಾದವು; 140 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.